Friday, January 16, 2009

ಸಕ್ಕರೆ ನಗುವಿನ ಅಕ್ಕರೆಯ ಗೆಳತಿ 'ಸೌಮ್ಯ'ಳ ಕವನ, ಪತ್ರಗಳು


ಪ್ರಾರ್ಥನೆ
ಜೀವನದಂಗಳದಲ್ಲಿ
ಪ್ರೇಮದಾಟವನ್ನು
ಆಡುವ ಮುಂಚೆ
ಸೋಲು-ಗೆಲುವುಗಳ
ಪರಮಾರ್ಶಿಸಬೇಕಾಗಿ
ಕಳಕಳಿಯ ಕೋರಿಕೆ

ಪ್ರೇಮಿ
ತನುಮನವೆಲ್ಲಾ ವ್ಯಾಪಿಸಿ
ಅಣುಅಣುವಿನಲ್ಲೂ
ನೋವೇ ತುಂಬಿ
ಬದುಕಿನಿಂದ ದೂರವಾಗಿ
ನೋವಿನ ತರಂಗವನ್ನೇ ಮೀಟುತ್ತಿರು
ಎಂದು ವಿಷಾದ ಗೀತೆಯ
ಉಡುಗೊರೆ ಕೊಟ್ಟು ಹೋದವ

ತರ್ಪಣ
ಬಾಂಧವ್ಯಗಳ ಜೊತೆ
ಬಂಧುವಿನಂತೆ ನಟಿಸಿ
ಆಟದ ವಸ್ತುವಿನಂತೆ
ನನ್ನ ಬಳಸಿಕೊಳ್ಳಲು ಬಯಸಿ
ಮುಗ್ಧ ಭಾವನೆಗಳ ಕೊಂದ
ನಿನ್ನ ಮನಸಿಗೆ ಅಶ್ರುನಮನ

ವಿನಂತಿ
ಎದೆಯಾಳದಿಂದ ಹೊರಹೊಮ್ಮುವ
ನಿಟ್ಟುಸಿರಿನ ಬಿಸಿ
ನಿನ್ನ ಸುಡುವ ಮುನ್ನ
ಹುಡುಗಾಟದಲ್ಲಿ ನೀನು
ನನ್ನೆದೆಯಲ್ಲಿಟ್ಟ ನೆನಪಿನ
ಗುರುತನ್ನು ಕಾಣದಂತೆ ಅಳಿಸಿಬಿಡು

ನಾಚಿಕೆ
ಸೂರ್ಯ ರಶ್ಮಿಗೆ
ಸಂಕೋಚದಿಂದ
ಮುದುಡಿದ ತಾವರೆಯಂತೆ
ನಿನ್ನ ನೋಡಿದಾಕ್ಷಣ
ಕೆಂಪೇರಿದ ಕೆನ್ನೆಯೊಂದಿಗೆ
ತಲೆಬಾಗಿಸಿ, ಕಾಲ್ಬೆರಳಿನಿಂದ
ನೆಲಕೆರೆದು ವ್ಯಕ್ತಪಡಿಸಿದ
ಹೆಣ್ತನದ ಸೂಚನೆ

ದ್ರೋಹ
ನನ್ನೆಲ್ಲಾ ನಂಬಿಕೆ,
ಭರವಸೆಗಳನ್ನು
ಗಾಳಿಗೆ ತೂರಿ,
ಮನಸಿನರಗಿನ ಮನೆಗೆ
ಕೊಳ್ಳಿ ಇಟ್ಟ
ನಿನ್ನ ಮನದ ಒಳಸಂಚು !!!

ಬದುಕಂದ್ರೆ.........
ಎಲ್ಲಾ
ಯಾರೂ ಇಲ್ಲದಂತಹ
ಏಕಾಂಗಿತನವೇ
ತುಂಬಿಕೊಂಡಕತ್ತಲೆ ಕೋಣೆ

ಕಟ್ಟಿಕೊಂಡ ಕನಸುಗಳು
ನಂಬಿಕೆ ಕಳೆದುಕೊಂಡು
ಬೆತ್ತಲಾಗಿ ಸತ್ತು ಮಲಗಿದರೂ
ಜೀವನ ನಡೆಸಬೇಕಾದ ಅನಿವಾರ್ಯತೆ

ನಾನೆಂಬ ಭಾವ ಸತ್ತು
ಇನ್ನೊಬ್ಬರ ಖುಗಾಗಿ
ಸುಳ್ಳೆ ಸುಳ್ಳು ನಗುತ್ತಾ
ಕಳೆಯಬೇಕಾಗಿರುವ ಮನೋಜ್ಞ ಅಭಿನಯದ
ಸುಂದರ ನಾಟಕ

ಒಂದು ಜೀವದ ನೋವನ್ನು
ಬಲವಂತದಿಂದ ಕಿತ್ತುಕೊಂಡು
ಮತ್ತೊಂದು ಜೀವಿಯ ಸಂತೋಷಕ್ಕೆ ಅದನ್ನು
ಟಾನಿಕ್‌ನಂತೆ ನೀಡುವಕಪಟ ವೈದ್ಯ

ಸಂತೋಷ, ಹತಾಶೆ, ಸೆಳೆತ, ಮಿಡಿತ
ಹೀಗೆ ನೂರಾರು ಭಾವನೆಗಳನ್ನು
ಕಟ್ಟಿಕೊಂಡು ಶರವೇಗದಲ್ಲಿ ಓಡುವ ಕಾಲರಾಯನ ಗೆಳೆಯ





ದೇವರೇ, ನಿನಗೊಂದು ಪತ್ರ!!

ದೀಪವು ನಿನ್ನಿಂದಲೇ ಗಾಳಿಯು ನಿನ್ನಿಂದಲೇ ಆರದಿರಲಿ ದೇವಾ ಎಂದು ನೂರು ನಂಬಿಕೆಂದ ಕೈಮುಗಿದು ಒಳ ಬಂದ ಯಾತ್ರಿಕರಿಗೆ ದೀಪವನ್ನು ಆರಿಸಿ ತಮಾಷೆ ನೋಡುವ ಬುದ್ದಿ ನಿನಗೆ ತರವೇ ದೇವರೆ? ತುಂಬು ನೋವುಗಳನ್ನು ಕೊಟ್ಟು ಅದಕ್ಕೆ ಪರಿಹಾರವನ್ನು ನೀನೇ ಕೊಟ್ಟು ಕಟ್ಟ ಕಡೆಯ ನಂಬಿಕೆ ಕಳಚಿ ಬೀಳುವ ಮೊದಲು ನಾನಿದ್ದೇನೆ ಎಂದು ಭರವಸೆ ಕೊಡುವ ನಾಟಕ ಏಕೆ ಬೇಕು? ಕಾಯುವ ನೀನೇ ಕೊಲ್ಲುವವನಾದರೆ ನಿನ್ನ ಮೇಲಿಟ್ಟಿರುವ ವಿಶ್ವಾಸ, ನಿಯತ್ತಿಗೆ ಬೆಲೆ ಏನು?!! ಬೇಡ ಬೇಡವೆಂದರೂ ಎಲ್ಲ ರೀತಿಯ ಸೌಲಭ್ಯಗಳನ್ನು ಕೊಟ್ಟೆ. ಅದನ್ನೆಲ್ಲಾ ಜತನದಿಂದ ಕಾಪಾಡಿಕೊಂಡು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸತೊಡಗಿದ ಮರುಕ್ಷಣವೇ ನನ್ನಿಂದ ಅದನ್ನು ಕಿತ್ತುಕೊಳ್ಳತೊಡಗಿದೆ. ಸಂಕಟ ಬಂದಾಗ ವೆಂಕಟರಮಣ ಅಂತಾರೆ ಆದ್ರೆ ನಿನ್ನ ನಾನು ನೆನೆಯದೆ ಹೋದ ಕ್ಷಣ ಯಾವುದಿತ್ತು ಹೇಳು??? ಕಷ್ಟಗಳನ್ನು ಕೊಡುತ್ತಲೇ ಇದ್ದರೂ ನಿನ್ನನ್ನು ನಾನು ಎಂದಾದರೂ ದೂರಿದ್ದೇನಾ?? ನನ್ನ ಹಣೆಬರಹ ಎಂದು ಸುಮ್ಮನಿದ್ದೆ. ಗಾಯದ ಮೇಲೆ ಬರೆ ಎಳೆದಂತೆ ಪುನಹ ಪುನಹ ಅದೇ ನೋವುಗಳನ್ನು ಕೊಡುತ್ತಾ ಹೋದರೆ ಹೇಗೆ ತಾನೆ ಸವಿಸಲಿ??? ಇತ್ತೀಚೆಗೆ ನೀನು ಕೊಡುತ್ತಿರುವ ನೋವನ್ನು ಮಾತ್ರ ನನ್ನಿಂದ ಸವಿಸೋಕೆ ಸಾಧ್ಯವಾಗುತ್ತಿಲ್ಲ.. ನಿನಗೆ ಹರಸಿಕೊಂಡ ನೂರಾರು ಹರಕೆಯ ಫಲದಿಂದ ಹುಟ್ಟಿದವಳು ನಾನು. ಇಷ್ಟೆಲ್ಲಾ ನೋವು ಕೊಡುವ ನಿನಗೆ ನನ್ನ ಸ್ಠೃಸುವ ಹಕ್ಕು ಯಾರು ಕೊಟ್ರು? ನಿನ್ನ ಭಕ್ತರನ್ನು ಸಂತೋಷವಾಗಿಡುವ ಒಂದೇ ಒಂದು ಕಾರಣಕ್ಕೆ ಅಮಾಯಕಿ ನನನ್ನು ಈ ಭೂಮಿಗೆ ಉಡುಗೊರೆಯಾಗಿ ಕೊಡುವ ಅಗತ್ಯ ಇತ್ತಾ?? ಕಾಪಾಡೋಕೆ ಆಗದೆ ಇದ್ದ ಮೇಲೆ ಕಾಯುವ ಕೆಲಸವನ್ನು ಏಕೆ ಒಪ್ಪಿಕೊಂಡೆ!! ಆದರೂ ನಾನು ನಂಬಿರೊದು ನಿನ್ನನ್ನೇ. ಅದಕ್ಕೆ ಸಾಕ್ಷಿ ಈ ಪತ್ರ...!! ಎಲ್ಲೆಲ್ಲೊ ಜಾರುವ ಮನಸ್ಸು ಎಲ್ಲೆ ಇರುವ ಮುಂಚೆ ತಡೆಯುವ ನೈತಿಕತೆ ಇರಲಿಲ್ವಾ ನಿಂಗೆ? ದೂರದಿಂದ ತೇಲಿ ಬಂದ ಅವನು ಮನಸಿನ ಬೇಲಿ ದಾಟುವ ಮೊದಲೇ ತಡೆಯಬೇಕಿತ್ತು. ಈಗ ತಡೆದರೆ?? ನನ್ನ ಗೆಳೆಯರು ಹೇಳ್ತಾರೆ ನೀನೊಂದು ಕಲ್ಲುಬಂಡೆಯಂತೆ! ನಿನಗೆ ಮನಸ್ಸೇ ಇಲ್ವಂತೆ!! ಸುಳ್ಳು ಅವರೆಲ್ಲಾ ಸುಳ್ಳು ಹೇಳ್ತಾರೆ.. ಅಲ್ವಾ? ಇಲ್ಲಿಯತನಕ ನನಗೆ ಎಲ್ಲವೂ ನೀನೇ. ಅಪ್ಪ, ಅಮ್ಮ, ಗೆಳೆಯ, ಶುಭಕಾಂಕ್ಷಿ ಎಲ್ಲವೂ... ಪ್ರತಿದಿನದ ಘಟನೆಗಳನ್ನು ನಿನ್ನೆದುರು ಹಂಚಿಕೊಂಡು ಎಷ್ಟು ಸಲ ನಕ್ಕಿಲ್ಲ, ಎಷ್ಟು ಸಲ ಅತ್ತಿಲ್ಲ ನೀನು ಎಷ್ಟು ಸಲ ಧೈರ್ಯ ತುಂಬಿಲ್ಲ!! ಆದರೆ ಅವನನ್ನು ಪ್ರೀತಿಸೋ ವಿಷಯದಲ್ಲಿ ಟಿಪಿಕಲ್ ಇಂಡಿಯನ್ ಅಪ್ಪನ ತರಹ ಯಾಕಡ್ತಾ ಇದೀಯಾ?? ನಂಗೆ ಅವನಿಲ್ಲದೆ ಬದುಕೋಕೆ ಆಗಲ್ಲ ಪ್ಲೀಸ್ ಪ್ಲೀಸ್ ನಮ್ಮಿಬ್ಬರನ್ನು ದೂರ ಮಾಡ್ಬೇಡ. ಅವನು ಬಂದ ಅಂತ ನಾನು ನಿನ್ನನ್ನು ಆವಾಯ್ಡ್ ಮಾಡಲ್ಲ. ನನ್ನಾಣೆಗೂ!! ಅವನು ನನಗೆ ಬದುಕಾದರೆ ನೀನು ನನ್ನ ಜೀವ... ಅವನು ಉಸಿರಾದರೆ ನೀನು ಅದರಲ್ಲಿನ "ಡಿತ ಪೂಸಿ ಹೊಡಿತೀದಿನಿ ಅಂದ್ಕೋಬೇಡ ಇದು ನಿಜ. ಪ್ಲೀಸ್ ಅವನನ್ನು ನನ್ನ ಯಜಮಾನ ಆಗೋ ಹಾಗೇ ಮಾಡೋ .. ನಂಗೆ ಗೊತ್ತು ನಿಂಗೆ ಭಯ ನನ್ನ ಜೀವನದಲ್ಲಿ ಅವನು ಬಂದ್ರೆ ನಾನು ನಿನ್ನ ಮರೆತು ಬಿಡ್ತಿನಿಂತ ಭಯ ಅಲ್ವಾ? ನಿನ್ನ ಮರೆತ ಕ್ಷಣ ನಂಗೆ ಸಾವೇ ಬರ್ಲಿ ಅಂತ ಶಾಪ ಕೊಟ್ಟೆ ನ"ಬ್ರನ್ನ ಒಂದು ಮಾಡೋ.. ಅದು ನಿನ್ನಿಂದ ಮಾತ್ರ ಸಾಧ್ಯ.. ಹ್ಞೂಂ ನೀನು ಮಾಡೇ ಮಾಡ್ತೀಯಾ... ಇಲ್ಲಿ ತನಕ ಬದುಕೋ ಉತ್ಸಾಹ ಕೊಟ್ಟವನು ನೀನೇ ಬದುಕು ಕಸಿದುಕೊಳ್ಳಲ್ಲಾ ಅನ್ನೋ ಭರವಸೆ ಇದೆ... ಹುಸಿ ಮಾಡ್ಬೇಡ. ಲವ್ ಯು ಕಣೋ... ನಿನ್ನ ಜೀವ - ಸಿಂಚು

ಹೃದಯ ಹಿಂಡುತಿರುವ ಒಲವೇ
ಮೌನದಲ್ಲಿಯೇ ಮಾತಾಗಹೊರಟ ಹೃದಯದ ಹಿಡಿತಕ್ಕೆ ಮೌನದ ಯಾವ ಭಾವವು ಭಾಷೆಯಾಗದು ಅಂತ ಗೊತ್ತಿರಲಿಕ್ಕಿಲ್ಲ. ಸ್ನೇಹಿತನ ಸ್ನೇಹಿತನಾಗಿ ಪರಿಚಿತನಾದವನು ನೀನು. ನಾವಿಬ್ಬರೂ ಸ್ನೇಹಿತರಲ್ಲ ಆದರೂ ನಮ್ಮಿಬ್ಬರ ಸಂಬಂಧಕ್ಕೆ ಅರ್ಥ ಕೊಡಲು ನನ್ನಿಂದ ಆಗುತ್ತಿಲ್ಲ. ಅದು ಬರೀ ಆಕರ್ಷಣೆಯ? ಗೊತ್ತಿಲ್ಲ! ಪ್ರೀತಿ ಎಂಬ ರ್ಶೀಕೆ ಕೊಡಲಾ ಅದೂ ಗೊತ್ತಾಗ್ತಿಲ್ಲ! ಮನಸ್ಸು ನಿನ್ನ ಕಡೆ ವಾಲಬೇಡ, ಜಾಸ್ತಿ ಸಲುಗೆ ತಗೋಬೇಡ ಎಂದು ಆದಷ್ಟು ಬುದ್ಧಿವಾದ ಹೇಳುತ್ತಲೇ ಇರುತ್ತದೆ. ಎಲ್ಲಿಯ ತನಕ ನಾನು ಮನಸಿನ ಮಾತಿಗೆ ಬೆಲೆಕೊಡಲಿ ಹೇಳು? ನಿನ್ನ ಮಾದಕ ಧ್ವನಿ, ಮಗುವಿನಂತಹ ನಗುವಿನ ನಾದಕ್ಕೆ ಮನಸ್ಸು ಅಂಜುತ್ತಲೆ ವಾಲಿಬಿಡುತ್ತದೆ. ನನಗೆ ಗೊತ್ತು ಎನೋ ಒಂದು ಸೆಳೆತಕ್ಕೆ ಒಳಪಟ್ಟಿದ್ದೀನೆಂದು, ಅದಕ್ಕೆ ಸ್ಪಷ್ಟ ರೂಪು ಕೊಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನೀನೆಂದೂ ನನ್ನ ಜೊತೆ ಪ್ರೀತಿ-ಪ್ರೇಮ ಎಂದು ಮಾತಾಡಿಲ್ಲ. ಡೊಂಬರಾಟದ ಮಾತುಗಳು ನನಗಿಷ್ಟವಾಗಲ್ಲ. ಮತ್ತೇ ನಾನು ಏನೆಂದು ಅರ್ಥ ಕಲ್ಪಿಸಲಿ ನಮ್ಮಿಬ್ಬರ ಸಂಬಂಧಕ್ಕೆ???? ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಇದನ್ನು ಅದರ ಸಾಲಿಗೆ ಸೇರುವಂತೆ ಮಾಡಬೇಡ. ಎಲ್ಲಾ ಏಕವಚನದ ಸಂಬೋಧನೆಗೆ ಕ್ಷಮೆ ಇರಲಿ. ಒಂದು ವೇಳೆ ನನ್ನ ಮನಸ್ಸು ಇದೆಲ್ಲವೂ ಪ್ರೀತಿ ಕಣೆ ಎಂದು ವಿವರಣೆ ಕೊಟ್ಟರೆ ಅದನ್ನು ನಾನು ಹೇಗೆ ಸ್ವೀಕರಿಸಲಿ? ಅದೂ ನನಗೆ ಗೊತ್ತಾಗ್ತಾ ಇಲ್ಲ. ಅಷ್ಟಕ್ಕೂ ಜಾತಿ ಎಂಬ ಪಿಡುಗು ಒಂದಿಲ್ಲ ಅಂದಿದ್ದರೆ ನಿನ್ನನ್ನು ಇಷ್ಟ ಪಡದೆ ಇರಲು ಕಾರಣಗಳೇ ಇಲ್ಲ. ನಿನ್ನ ಮನಸಿನ ಹೋಯ್ದಾಟವು ನಂಗರ್ಥವಾಗೊತ್ತೆ. ಕೆಲವು ಹುಡುಗಿಯರಲ್ಲಿ ತಮಾಷೆಗಾಗಿ `ನೀನು ನನ್ ಲವರ್ ಕಣೆ' ಎಂದು ರೇಗಿಸುತ್ತಿದ್ದ ಚಂಚಲ ಮನಸಿನ ಒಡೆಯ ನೀನು. ಅಂತಹ ಚಂಚಲತೆಗೆ ಚಂಚಲವೆನಿಸುವ ಸಮ್ಮೋಹಿನಿ ನನ್ನ ರೂಪದಲ್ಲಿ ನಿನ್ನನ್ನು ಹಿಡಿಹಿಡಿಯಾಗಿ ಆವರಿಸುತ್ತಿದೆ ಎಂಬ ಭ್ರಮೆಯಲ್ಲಿ ಬೆಚ್ಚಿ ಬಿದ್ದು `ನನ್ನ ಮನಸ್ಸು ಬ್ಲಾಂಕ್ ಆಗಿದೆ ಕಣೆ' ಎಂಬ ಮೆಸೆಜ್ ಕಳಿಸ್ತೀಯಲ್ಲ! ಅದಕ್ಕೆ ನಗಬೇಕೋ, ಅಳಬೇಕೋ? ನಿನಗೆ ಮನಸು ಮಾತ್ರ ಬ್ಲಾಂಕ್ ಆಗೊತ್ತೆ. ನನಗೆ ಜೀವನವೇ ಬ್ಲಾಂಕ್ ಆಗೋತ್ತೇನೋ ಎಂಬ ಭೀತಿ ಸದ್ದಿಲ್ಲದೆ ಮನದಲ್ಲಿ ಪ್ರತಿಷ್ಠಾಪನೆಗೊಂಡು ರಾಜ್ಯಭಾರ ಮಾಡುತ್ತಿದೆ. ಜಗತ್ತಿನ ಎಂಟನೇ ಅದ್ಭುತಗಳಲ್ಲೊಂದು ನೀನು ನನ್ನ ಮೇಲೆ ಇಷ್ಟೊಂದು ಕಾಳಜಿ ವಹಿಸ್ತಿರೋದು. ಸಾಧಾರಣಕ್ಕೆ ಸಾಧಾರಣ ಎನ್ನುವ ರೂಪ, ವ್ಯಕ್ತಿತ್ವದವಳನ್ನು "ಹಿಂದು ಮುಂದು ತಿಳಿಯದೆ ಅಸಾಧಾರಣವಾಗಿ ನಂಬಿದ್ಯಲ್ಲಾ ಅದು ಹೇಗೆ ಸಾಧ್ಯವಾತು? ನಿನಗೆ ಬಿಂದಾಸ್ ಆಗಿ ಇರಲು ಬರೊತ್ತೆ. ನನಗೆ ನೋವಲ್ಲೂ ಚೆಂದವಾಗಿ ನಗಲು ಬರೊತ್ತೆ. ಹಾಗಂತ ನಗುವೆಲ್ಲಾ ನೋವಾದರೆ? ಎಷ್ಟು ದಿನ ನನ್ನ ಚೆಂದದ ನಗುವಿಗೆ ಕೃತಕತೆಯ ಬಣ್ಣ ಬಳಿದುಕೊಂಡಿರಲು ಸಾಧ್ಯ. ಆದರೂ ನನ್ನೆಲ್ಲಾ ನೋವುಗಳ ನಡುವೆ ತುಟಿಯ "ಹಿಂದಿನ ತುಂಟ ನಗುವಿಗೆ ನಿನ್ನ ನೆನಪು ಕೆಲವು ದಿನಗಳ ಮಟ್ಟಿಗಾದರೂ ಸಾಥ್ ಕೊಡ್ತಲ್ಲಾ ಅದು ಸಾಕು. ಮಂಜಿನ ಬಿಂದು ಕಣ್ಣಿನ ಕಡಲಿಂದ ಜಾರಿ ಕೆನ್ನೆಯನ್ನು ತೋಸುತ್ತಿದ್ದರೂ ತುಟಿಯಲ್ಲಿ ಸ್ನಿಗ್ಧ ನಗು ಮಾಸದೆ ಉಳಿಯುತ್ತಲ್ಲ ಅದು ದೇವರು ಸ್ಪೆಶಲ್ ಆಗಿ ನನಗೆ ಕೊಟ್ಟ ವರ. ಅದನ್ನೂ ಕಸಿದುಕೊಳ್ಳಲು ಎಂಥಹ ಕ್ಷುದ್ರ ಶಕ್ತಿಗಳಿಗೂ ಅಸಾಧ್ಯ. ಹಾಗಾಗಿ ಯಾತನೆಯಲ್ಲೂ ಮುಗುಳ್ನಗುವ ಪುಟ್ಟ ಹುಡುಗಿ ನಾನು. ನೀನಿಟ್ಟ ಒಲವು ಒಡಲನ್ನು ಸುಡುವಂತಾದರೆ ಪುಟಾಣಿ ಮನಸು ಅದನ್ನು ಹೇಗೆ ಸಹಿಸೊತ್ತೊ!! ನನಗಂತೂ ತಿಳಿಯದು. ತಿಳಿದು ತಿಳಿದೂ ಯಾಕೆ ಸಮುದ್ರದಲ್ಲಿ ಕೈ ಹಿಡಿದು ಈಜಿಸುವ ಸಾಹಸ ಮಾಡುತ್ತಿರುವೆ? ಬದುಕಿ ದಡ ಸೇರುತ್ತೇವೆಂಬ ಭರವಸೆಗೆ ನೀನು ನಂಬಿರುವ ಎಲ್ಲಾ ದೇವರುಗಳು ಆಶೀರ್ವದಿಸುತ್ತಾರೊ ಕಾದು ನೋಡಬೇಕು.
ಕಳೆದು ಹೋಗುವ ಭೀತಿಯಲ್ಲಿ - ಸಿಂಚು


ಹೇ ಓಮನ್‌ನ ಗೆಳೆಯ,
ಮಾಘ ಮಾಸದಲ್ಲಿ ಭೂರಮೆಯನ್ನು ಮುಂಜಾವಲ್ಲಿ ಮೊದಲು ಚುಂಬಿಸಿದ ಇಬ್ಬನಿಗೆ ಹೇಗೆ ಧನ್ಯತಾ ಭಾವವಿರೊತ್ತೊ ಹಾಗೆ ಭೂದೇವಿಯ ಮನಸಿನ ಮುಕುಟದಲ್ಲಿ ಆ ಹನಿ ಶಾಶ್ವತವಾದ ಸ್ಥಾನವನ್ನು ಪಡೆಯುತ್ತದೆ ಅದರಂತೆ ನೀನು ಮೊದಲ ಗೆಳೆಯನೆಂದು ಪರಿಚಿತವಾಗಿ ನನ್ನ ಮನಸಿನರಮನೆಯಲ್ಲಿ ಅಚ್ಚಳಿಯದ ಗುರುತಾಗಿ ಉಳಿದುಬಿಟ್ಟೆ ಕಣೋ. ಬಂಧನದ ಅನುಬಂಧ ನಮ್ಮಲಿಲ್ಲದಿದ್ದರೂ ಒಂಥರಾ ಬಂಧುವಾಗಿ ಬಿಟ್ಟಿದ್ದೆ ನೀನು. ದಿಟ್ಟ ಮನಸ್ಸಿನ ಹುಡುಗಿಯಾದರೂ ನೀನು ರೇಗಿಸಲೆಂದು ಹೇಳುವ ಪ್ರತಿ ಚಿಕ್ಕ ಮಾತುಗಳು ಮನಸ್ಸಿನಾಳಕ್ಕೆ ಹೊಕ್ಕು ಹೃದಯವನ್ನು ಗಿಲ್ಲುತ್ತದೆ ನೋಡು ಅವಾಗ ಆಗುವ ನೋವಿನ ಯಾತನೆ ಬೇಡವೇ ಬೇಡ. ನಾವಿಬ್ಬರೂ ಪೋನ್‌ನಲ್ಲಿ ಮತ್ತು ನೆಟ್‌ನಲ್ಲಿ ಸಂಪರ್ಕಿಸಿದ್ದು ಬಿಟ್ಟರೆ ಅಪರಿಚತರೆ. ನನ್ನ ಪುಟ್ಟದಾದ ಹೃದಯದಲ್ಲಿ ಮೋಡಗಳ "ಹಿಂಡಂತೆ ಸ್ನೇಹಿತರಿದ್ದರೂ ಆ ಮೋಡಗಳ ನಡುವೆ ಮಿನುಗುವ ಕಾಮನಬಿಲ್ಲಂತೆ ನೀ ನಗುತಿರುವೆ. ನಿನಗೂ ಗೊತ್ತು ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ಜಗಳ ತೆಗೆಯುವವಳು ನಾನಲ್ಲವೆಂದು. ಆದರೂ ನಿನ್ನೊಂದಿಗೆ ಜಗಳ ಆಡಲೇಬೇಕು ಎಂದು ಜಾತಕಪಕ್ಷಿಯಂತೆ ಕಾಯುತ್ತಿರುವ ನನಗೆ ಆ ಚಿಕ್ಕ ವಿಷಯಗಳೇ ಸಾಕಾಗುತ್ತೆ. ಬೇರೆ ಹುಡುಗಿಯರೊಂದಿಗೆ ನೀನು ಮನಬಿಚ್ಚಿ ಮಾತನಾಡುವಾಗ ನನ್ನ ಮನಸಿನ ಕಿಚ್ಚು ಒಳಗಿನಿಂದಲೇ ಹುಟ್ಟಿ ಅಲ್ಲಿಯೇ ಬೂದಿಯಾಗುತ್ತದೆ. ಅದರ ಅಸಹನೆಯನ್ನು ತೋರ್ಪಡಿಸಲು ಆಗದೆ ಮನ ಹಿಡುಕಿನಿಂದಲೆ ಚಡಪಡಿಸೊತ್ತೆ. ಮತ್ತು ನೀನೆಂಬ ಮಾಯವಿ ಗೆಳೆಯನಿಗೆ ಮುದ್ದಾಗಿ ರೇಗುತ್ತದೆ. ನಿನ್ನ ಗೋಗರೆತ ಅಪ್ಯಾಯಮಾನವಾದರೂ ಎಲ್ಲಿ ನೀನು ನನ್ನಿಂದ ಮರೆಯಾಗಿ ಹೋಗುತ್ತೀಯೋ ಎನ್ನುವ ಅಳುಕಿನಿಂದಲೇ ನಿನ್ನೊಂದಿಗೆ ಪುನಹ ಮಾತನಾಡುತ್ತೇನೆ ತುಂಬು ಮನಸ್ಸಿನಿಂದಲೇ. ಇಷ್ಟೆಲ್ಲಾ ಮನದಲ್ಲಿ ಆರಾಧನೆ ಇಟ್ಟುಕೊಂಡ ಮೇಲೆ ನಿನ್ನ ಮೇಲೆ ಪ್ರೀತಿ ಹುಟ್ಟಿರಬೇಕು ಎಂದು ಕಲ್ಪಿಸಿಕೊಂಡರೆ ಅದನ್ನು ಈಗಲೇ ಮನಸಿನಿಂದ ಅಳಿಸಿಬಿಡು. ಸೀಮಿತ ವ್ಯಾಪ್ತಿಯ ಪ್ರೀತಿಯ ಪರಿಧಿಗಿಂತ ಮಿಗಿಲಾದ ಸ್ನೇಹದ ಬಾಂಧವ್ಯದಲ್ಲಿ ಬದುಕು ಅಜೇಯ. ಮೊನ್ನೆ ನಡೆದ ಘಟನೆಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಗೆಳೆಯ. ನಾನಿರುವ ಪುಣ್ಯಭೂಮಿಯಲ್ಲಿ ಸಂಬಂಧಗಳನ್ನು ಅಪವಿತ್ರಗೊಳಿಸುವ ಹಕ್ಕು ಯಾರಿಗೂ ಇಲ್ಲ. ಪವಿತ್ರತೆಯಲ್ಲಿಯೇ ಹುಟ್ಟಿ, ಉತ್ತಮ ಸ್ತರದ ಸಂಸಾರದಲ್ಲಿ ಜನಿಸಿದ ನಾನು ಕೀಳುಮಟ್ಟದಿಂದ ಯೋಚನೆ ಮಾಡುತ್ತೇನೆಂದು ನಿನಗನ್ನಿಸಿದ್ದು ಬರೆ ಎಳೆದಂತಾತು. ಅದಕ್ಕಾಗಿಯೇ ಆ ಜಗಳ, ಮುನಿಸು.. ನಿನ್ನ ಗೋಗರೆತ.. ನನ್ನ ಒಲವು ತುಂಬಿದ ತಾತ್ಸಾರದ ನಾಟಕ! ಮಾತನಾಡುವ ಹಂಬಲಿಕೆಯೊಂದಿಗೆ ಫೋನ್ ಮಾಡೋಣವೆಂದರೆ ಎಂಥದೋ ಒಂದು ಬಿಗುಮಾನ. ಈ ಮನನೋಸುವ ಕೆಲಸ ಬೇಡವೇ ಬೇಡ ಎಂದು ತೀರ್ಮಾನಿಸಿಯಾಗಿದೆ. ಮೊದಲಿದ್ದ ಹಾಗೆಯೇ ಮುಗ್ಧತೆಯಲ್ಲಿಯೇ ಬದುಕುವ ಹಪಾಹಪಿ ಆಳವಾಗಿ ಬೇರುಬಿಟ್ಟಿದೆ. ಕಾಯುವ ಕನಸುಗಳೇ ಕಾಡುವ ನೆನಪಾದರೆ ವ್ಯಥೆಯ ಕಾದಂಬರಿಗೆ ಕೊನೆಯೆಲ್ಲಿ! ಅದಕ್ಕಾಗಿ ಮುನ್ನುಡಿಯಂತೆ ಕೊನೆಯನ್ನು ಸುಖಾಂತ್ಯಗೊಳಿಸುವುದಕ್ಕಾಗಿಯೇ ಬಾಲಿಶ ಮನದ ಹುಡುಗಿಯಾಗಿಯೇ ನೀನೆಂಬ ಮಾಮರದಲ್ಲಿ ಕೋಗಿಲೆಯಾಗುತ್ತೇನೆ. ನನ್ನೆಲ್ಲಾ ಹುಡುಗಾಟಿಕೆ, ತುಂಟಾಟಗಳು ಜಾಸ್ತಿ ಎನಿಸಿದ್ದರೆ ಕ್ಷಮಿಸಿ ಬಿಡೋ ಒಮ್ಮೆ ನನ್ನ ಹಾಗೇ ಸುಮ್ಮನೆ. ನಿನ್ನ ಸ್ನೇಹದೊಡತಿ ಚೋಮ

ಕೋಲಾಜ್... ಬದುಕಿನ ಬಿಡಿ ... ಬಿಡಿ... ಚಿತ್ರಣ
ಕೆಲವರು ಅಜಾತ ಶತ್ರುಗಳಿರ್ತಾರೆ. ಎದುರುಗಡೆ ಸಭ್ಯಸ್ಥವಾದ ಮಂದಹಾಸವನ್ನು ಸೂಸುತ್ತಲೇ ಮಟ್ಟಸವಾದ ವ್ಯಕ್ತಿತ್ವ ಎಂದು ಭಾಸವಾಗುವಂತೆ ನಾಟಕೀಯವಾಗಿ ಬದುಕುವವರು ಅವರು. ವಿದ್ಯೆ ಇರುತ್ತದೆ, ತಾನೂ ಮಾಡಿದ್ದು ತಪ್ಪು ಎಂಬ ಭಾವನೆಯೂ ಮನದಲ್ಲಿರುತ್ತದೆ ಅದೆಲ್ಲವೂ ತಿಳಿದು ಹೇಸಿಗೆಯಲ್ಲಿ ಬೀಳಲು ತಯಾರಾಗಿರುವ ಮೂರ್ಖತನಕ್ಕೂ ಅವರು ಸೈ. ಅವರ ನಡುವೆ ಬಾಳುತ್ತಾರಲ್ಲ ನಿಜವಾದ ಸಭ್ಯಸ್ಥರೂ ಅವರಿಗೂ ಇದರಿಂದ ಕಿರಿಕಿರಿ ಆದರೂ ತಡೆದುಕೊಳ್ಳದೇ ವಿಧಿಲ್ಲದ ಪರಿಸ್ಥಿತಿ. ಮೊನ್ನೆ ಗೆಳತಿ ವಿದ್ಯಾಳನ್ನು ಭೇಟಿಯಾಗಲೆಂದು ಅಪರೂಪಕ್ಕೆ ಅವಳ ಹಾಸ್ಟೆಲ್ ಕಡೆ ಹೋದೆ. ವಿದ್ಯಾ ಯಾಕೋ ಎಂದಿನಂತಿರದೇ ಸಪ್ಪಗಿದ್ದಳು. ಆಶ್ಚರ್ಯವಾತು. ಎಂತಹ ಪರಿಸ್ಥಿತಿಯಲ್ಲೂ ದೃತಿಗೆಡದ ವ್ಯಕ್ತಿತ್ವ ಆ ಹುಡುಗಿಯದು. ಏನಾಯ್ತೇ ಎಂದು ಕೇಳಿದ್ದೆ ತಡ ಬೋರೆಂದು ಅತ್ತು ಬಿಟ್ಟಳು. ಅವಳ ಪಾಡಿಗೆ ಅವಳನ್ನು ಅಳಲು ಬಿಟ್ಟುಬಿಟ್ಟೆ. ಸ್ವಲ್ಪ ಹೊತ್ತಿಗೆ ಅವಳು ಸರಿಹೋದಳು. ದುಗುಡದ ಕಾರಣ ಕೇಳಿ ನನಗೂ ಖೇದವಾತು. ಹಳ್ಳಿಂದ ಬಂದ ಮುಗ್ದತೆಯ ಹುಡುಗಿ ವಿದ್ಯಾ. ಸ್ನೇಹ ಅಂದರೆ ಸ್ವಚ್ಛ ಹಾಲಿನಷ್ಟೇ ಪರಿಶುದ್ಧ ಎಂಬಂತೆ ಸ್ನೇಹವನ್ನು ಆರಾಧಿಸುತ್ತಿದ್ದಳು. ಆಕೆಯ ಆಫೀಸ್‌ನ ಗೆಳತಿಯೊಬ್ಬಳು ವಿದ್ಯಾಳ ಎದುರಿಗೆ ಅಕ್ಕನಂತೆ ವರ್ತಿಸಿ, ಅವಳನ್ನು ತನ್ನ ತಂಗಿಯಂತೆ ಎಂದೇ ಎಲ್ಲರ ಮುಂದೆ ಪರಿಚುಸುತ್ತಿದ್ದಳು. ಪಾಪ! ಹುಡುಗಿ ಮೊದಲೆ ಮುಗ್ಧೆ ಯಾವಗಲೂ ಗೆಳತಿಯ ಗುಣವನ್ನು ಹಾಡಿಹೊಗಳುತ್ತಿದ್ದಳು. ಆ ಗೆಳತಿ ಸ್ವಲ್ಪ ದಿನಕ್ಕೆ ತನ್ನ ವರಸೆ ತೋರಿಸಿಯೇ ಬಿಟ್ಟಳು. ವಿದ್ಯಾಳ ಬಾಸ್‌ಗೆ ಹೋಗಿ ವೃಥಾಪವಾದವನ್ನು ಮಾಡತೊಡಗಿದ್ದಳು. ಇವಳ ಜೊತೆ ಮಾತ್ರ ಅದೇ ಹಿಂದಿನ ಸಲುಗೆ ತೋರಿಕೆಯ ಪ್ರೀತಿ, ಮಮತೆ ಎಂಬ ನಾಟಕವನ್ನು ಆಡುತ್ತಲೇ ಇದ್ದಳು. ಮೊನ್ನೆಯ ದಿನ ಅವಳ ಬಾಸ್ ಅವಳನ್ನು ಕರೆದು ನಾಳೆಂದ ಆಫೀಸ್‌ಗೆ ಬರಬೇಡ. ನೀನು ಆಫೀಸ್‌ನ ರೂಲ್ಸ್‌ನ್ನು ಹಾಳುಗೆಡವಿದ್ದೀಯಾ, ನಿನ್ನ ಗೆಳತಿಯೇ ನಿಮ್ಮ ಬಗ್ಗೆ ಇಷ್ಟೆಲ್ಲಾ ಅಂದ ಮೇಲೆ ಅದೆಷ್ಟು ಹದಗೆಟ್ಟಿರಬೇಕು ವ್ಯವಸ್ಥೆ ಎಂದು ಅಬ್ಬರಿಸಿದಾಗ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅಳುತ್ತಲೇ ಬಂದಿದ್ದಳು. ಅವಳಿಗೆ ಸ್ವಲ್ಪ ಸಮಾಧಾನದ ಮಾತನಾಡಿ ಮೇಲೆದ್ದೆ. ಬೆನ್ನಿಗೆ ಚೂರಿ ಹಾಕೋ ಬುದ್ದಿ ಎಂದರೆ ಇದೇನಾ? ಅನ್ನಿಸ್ತು. ನನ್ನ ಗೆಳತಿಯರನ್ನು ಆ ಮೂರ್ಖ ಹೆಂಗಸಿನೊಂದಿಗೆ ತುಲನೆ ಮಾಡಿ ನೋಡಿದೆ. ಯಾರೂ ಅಂಥವರೂ ಗೋಚರವಾಗದೆ ಹೋದರೂ ಮನದಾಳದಲ್ಲಿರುವ ಗೋಸುಂಬೆ ಬುದ್ಧಿಯನ್ನು ಕಂಡುಹಿಡಿಯುವುದೆಂದು. ನಿಮ್ಮ ಗೆಳತಿಯರಲ್ಲಿ ಅನಾವಶ್ಯಕವಾದ ವಿಷಯವನ್ನು ಎಂದಿಗೂ ಹೇಳದಿರಿ. ವೈಯಕ್ತಿಕ ವಿಷಯಗಳನ್ನು ಎಂದೂ ಅವರ ಮುಂದೆ ತೆರೆದಿಡಬೇಡಿ. ಅದು ನಿಮ್ಮ ಯಶಸ್ಸಿನ ಹಾದಿಯಲ್ಲಿ ಚುಚ್ಚುವ ಗಾಜಿನ ಚೂರಾದಿತು ಜೋಕೆ!!
ಪ್ರೀತಿಂದ ಸೌಮ್ಯ ಹೆಬ್ರಿ

ಹೃದಯ ಗೆದ್ದ ಗೆಳೆಯ,
ಬೇಡವೆಂದರೂ ಗೆಳೆತನಕ್ಕೆ ಹಾತೊರೆಯುವ ಹುಡುಗ ಹುಡುಗಿಯರನ್ನೇ ನೋಡಿದ ನನಗೆ, ನಿನ್ನ ನೋಡಿದ ಮೊದಲ ಸಲವೇ ಎದೆಯಲ್ಲಿ ಏನೋ ಒಂಥರಾ ಅನುಭವ. ಆದರೆ ಹುಡುಗ! ನೀನು ನನ್ನ ಅವಾಯ್ಡ್ ಮಾಡ್ತಿಯಲ್ಲಾ ಅದು ಅತ್ಯಂತ ಯಾತನಾಭರಿತವಾದ ಶೋಕಗೀತೆಯಾಗಿದೆ ನನ್ನ ಪಾಲಿಗೆ. ನಾನು ನಿನ್ನನ್ನು ಭೇಟಿಯಾಗಬೇಕೆಂದು ಬಯಸಿದವಳೇ ಅಲ್ಲ. ನಿನ್ನ ಹಠಕ್ಕೋಸ್ಕರವೇ ಭೇಟಿಯಾದೆ. ಭೇಟಿಯಾದ ಮೊದಲ ಸಲವೇ ನೀನು ನನಗೆ ಇಷ್ಟವಾಗಿ ಬಿಟ್ಟೆ. ಅರಳು ಹುರಿದಂತೆ ಮಾತನಾಡುವ ನನ್ನ ವಾಖ್‌ಚಾತುರ್ಯಕ್ಕೆ ನಿನ್ನದು ನಗುವೊಂದೇ ಉತ್ತರವಾಗಿತ್ತಲ್ಲ. ಅದೇ ಕಣೋ ನನ್ನ ಸೆಳೆದ ಮೊದಲ ಅಂಶ. ನಮ್ಮಬ್ಬರ ಭಾವಗಳು ತದ್ವಿರುದ್ಧ ಆದರೆ ಅಂದಿನ ದಿನ ಎಂದೂ ಆಗಿರದಂತಹ ಅನುಭೂತಿಯ ಕಂಪನ ಒಡಲಾಳದಿಂದ ಹಿಡಿದು ನರನಾಡಿಗಳಲ್ಲಿ ಪಸರಿಸಿತ್ತು. ಅಂದಿನಿಂದ ನಾನು ಕಳೆದುಕೊಂಡ ರಾತ್ರಿಯ ನಿದ್ರೆಗಳೆಷ್ಟೋ, ನಡುವೆಯೇ `ಕುಛ್ ಕುಛ್ ಹೋತಾ ಹೈ' ಎಂದು ನೀರವ ಮೌನದಲ್ಲಿ ಮನಸ್ಸಿನೊಂದಿಗೆ ಪಿಸುಗುಡುತ್ತಿದ್ದಿದ್ದು ಎಷ್ಟು ಬಾರಿಯೋ. ರಾತ್ರಿಯ ಜೀರುಂಡೆ ನಾದಕ್ಕೆ ನನ್ನ ಪಿಸುನುಡಿ ಕರಗಿಹೋಗುತ್ತಿತ್ತಲ್ಲ ಹಾಗೇಯೇ ನೀನು ನನ್ನ ಬಾಳಸಂಗಾತಿ ಆಗುವ ನನ್ನ ಭರವಸೆಗಳೂ ಕರಗುತ್ತಿದ್ದವು ಗೆಳೆಯ. ನೀನು ಎಲ್ಲೆ ಇರು ಹೇಗೆ ಇರು ಸುಖವಾಗಿರು ಎಂದು ಮಾತ್ರ ಆಶಿಸುತ್ತೇನೆ ಅದಕ್ಕೋಸ್ಕರ ನಿನ್ನ ನೆನಪಿಸಿಕೊಂಡು ಒಂದು ದಿನವೂ ನಾನು ಅತ್ತಿಲ್ಲ ಕಣೋ. ಹೆಣ್ಣಿನ ಕಣ್ಣೀರಿಗಿಂತ ದೊಡ್ಡ ಶಾಪ ಮತ್ತೊಂದಿಲ್ಲ ಎಂದು ನಂಬಿದವಳು ನಾನು. ನನ್ನ ಇನಿಯನಿಗೆ ನನ್ನ ಕಣ್ಣೀರು ಶಾಪವಾಗಬಾರದೆಂದು ದುಃಖವನ್ನು ನುಂಗಿ ನೀರು ಕುಡಿದು ಮಲಗಿಬಿಡುತ್ತೇನೆ ಕಣೋ. ನನ್ನ ನಿರಾಸೆ ನನ್ನ ಪಾಲಿಗೆ ಉಳಿದುಬಿಡಲಿ ನಿನ್ನ ತನಕ ಬಾರದೇ ಇರಲಿ. ನಾನು ತಾಲ್ಲದ ತಬ್ಬಲಿ ಸ್ವಲ್ಪ ದಿನದ ಮಟ್ಟಿಗೆ ನೀನು ನನ್ನ ಪಾಲಿಗೆ ತಾಯ ಸ್ಥಾನದಲ್ಲಿದ್ದೆ. ನನ್ನ ಕೆಲವು ಗುಣಗಳನ್ನು ತಿದ್ದಿ ತೀಡಿ ಒಂದು ಸ್ಪಷ್ಟ ರೂಪ ಕೊಟ್ಟೆ. ನವಿಲಂತೆ ಕುಣಿಯುತ್ತಿದ್ದ, ಮಳೆಯಲ್ಲಿ ನೆಂದ ನೈದಿಲೆಯಾಗುತ್ತಿದ್ದ, ಹಕ್ಕಿಗಳಂತೆ ಸ್ವಚ್ಛಂದವಾಗಿ ನನ್ನದೇ ಆದ ಪ್ರಪಂಚದಲ್ಲಿ "ಹರಿಸುತ್ತಿದ್ದ ನನ್ನನ್ನು ನೀನು ಬಂದು ಸ್ತಬ್ಧ ಮಾಡಿದೆಯಲ್ಲ. ಈಗ ಈ ಹುಡುಗಿ ಕೀ ಕೊಟ್ಟ ಬೊಂಬೆಯಂತೆ ಕಣೋ. ನಮ್ಮಿಬ್ಬರ ಪ್ರೇಮವನ್ನು ಮೊನ್ನೆ ತಾನೇ ನಮ್ಮ ಮನೆಯ ಹಿತ್ತಲಿನಲ್ಲಿ ಸಮಾಧಿ ಮಾಡಿದ್ದೇನೆ. ಅದರ ಭಾವಚಿತ್ರವನ್ನು ನನ್ನ ರೂಮಿನಲ್ಲಿಟ್ಟು ನಮ್ಮಿಬ್ಬರ ಒಡನಾಟ ನೆನಪಾದಾಗ ನಿಟ್ಟುಸಿರಿಟ್ಟು ಆ ಭಾವಚಿತ್ರಕ್ಕೆ ಒಂದು ಮೊಳ ಮಲ್ಲಿಗೆ ಮುಡಿಸಿ ನಿರಮ್ಮಳ ಭಾವದಂತೆ ನಟಿಸುತ್ತೀನಿ. ಮೊನ್ನೆ ನಿನ್ನ ಎಂಗೇಜ್‌ಮೆಂಟ್‌ಗೆ ಬಂದಿದ್ದೆ. ಎದುರುಗಡೆ ಕುಳಿತುಕೊಳ್ಳೋಷ್ಟು ಚೈತನ್ಯ ನನ್ನಲ್ಲಿರಲಿಲ್ಲ. ಆದರೆ ನಿನ್ನ ಜೋಡಿ ಹಕ್ಕಿ ಮಾತ್ರ ನಿನಗೆ ಹೊಂದಿಕೆನೇ ಆಗ್ತಿರಲಿಲ್ಲಾ ಕಣೋ! ಬರೀ ಹಣಕ್ಕೋಸ್ಕರ ನನ್ನ ಪ್ರೀತಿಯನ್ನೇ ಕೊಂದವ ನೀನು, ಬರೀ ಹಣಕ್ಕೋಸ್ಕರ ಮಂಥರೆ ರೂಪದ ಹುಡುಗಿಗೆ ಬಾಳು ಕೊಡಲು ಹೊರಟವನು ನೀನು. ಅವಳನ್ನಾದರೂ ಹಣದಿಂದ ಅಳೆಯಬೇಡ. ಗುಣದಿಂದ ಅಳೆದು ಸಂಸಾರ ನಿಭಾಸು. ಅವಳ ಕಣ್ಣಿಂದ ಒಂದು ತೊಟ್ಟು ನೀರು ಬರದಂತೆ ನೋಡಿಕೋ ಏಕೆಂದರೆ ಹೆಣ್ಣಿನ ಕಣ್ಣೀರು ಸುಡುವ ಜ್ವಾಲೆಯಾದಿತು ಜೋಕೆ! ಎಂದೆಂದೂ ಸುಖವಾಗಿರು.
ಕೊರಡು ಹೃದಯದ ಮಾಜಿ ಗೆಳತಿ ಕೊಬ್ರಿ
- ಸೌಮ್ಯ...

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2