Wednesday, July 22, 2009

ಇಂಟರ್ ಸಿಟಿ ಟ್ರೈನಿನಲ್ಲೊಬ್ಬ "ಕನ್ನಡ ಪುಸ್ತಕೋದ್ಯಮಿ"


ಚಾಯ್, ಚಾಯ್, ಟಿ... ಟಿ..., ಮಸಾಲೆ ವಡೆ, ಮಸಾಲೆ...
ಅಂತ ಟ್ರೈನ್ ಬಂಡಿಯ ಸ್ಟೈಲ್ ನಲ್ಲಿ ಕೂಗ್ತಾ ಇದ್ರು. ಆ ಕೂಗು ಒಂದೊಂದು ಸಾರಿ ನಿದ್ದೆ ಬರೆಸುತ್ತಿತ್ತು. ಅಂಥ ಕೂಗು ನೀವು ರೈಲಿನಲ್ಲಿಯೇ ಕೇಳಬೇಕು. ಮತ್ತೆಲ್ಲೂ ಅಲ್ಲ. ಟ್ರೈನಿ ಪಯಣವೇ ಒಂದು ದಿನ್ಯ ಅನುಭೂತಿ. ನಾನು ಎಂದಿಗೂ ಟ್ರೈನನ ಕುತೂಹಲಿ.
ಅಲ್ಲಿ ನಡೆಯುವ ಪ್ರತಿಯೊಂದು ಘಟನೆಯು ನನಗಿಷ್ಟ. ಒಂದು ಭೋಗಿಯ ಪ್ರಯಾಣಿಕರು ಐದು ನಿಮಿಷದಲ್ಲಿಯೋ ಒಂದೇ ಕುಟುಂಬದವರೇನೋ ಅನ್ನುವಷ್ಟರ ಮಟ್ಟಿಗೆ ಒಂದಾಗಿಬಿಟ್ಟಿರುತ್ತಾರೆ. ಟ್ರೈನಿನಲ್ಲಿ ಮಾರಲು ಬರುವ ವ್ಯಕ್ತಿಗಳು ತಿನ್ನಲು ವಿವಿಧ ಬಗೆಯ ತಿಂಡಿ ತಿನಿಸುಗಳು, ಆ ಸ್ಥಳದ ವಿಶೇಷ ತಿನಿಸು, ಹಣ್ಣು-ಹಂಪಲುಗಳನ್ನು ಮಾರುತ್ತಾರೆ.
ವಿಷಯ ಅದಲ್ಲ ಇಲ್ಲಿ.
ನನಗೆ ತಿಳಿದಂತೆ ಟ್ರೈನಿನಲ್ಲಿ ಅತಿ ಹೆಚ್ಚು ತಿನಿಸುಗಳಿಗೋ, ಇಲ್ಲವೆ ಭಿಕ್ಷಾಟನೆ ಹೆಚ್ಚಿರುತ್ತದೆ. ಒಮ್ಮೊಮ್ಮೆ ಅತಿ ಎನ್ನುವಷ್ಟು.
ಅದರೆ ನಾನು ಚಿಕ್ಕಮಗಳೂರು ಪಕ್ಕದ ಕಡೂರಿನಿಂದ ಹರಿಹರಕ್ಕೆ ಇಂಟರ್ ಸಿಟಿ ಟ್ರೈನಿನಲ್ಲಿ ಪ್ರಯಾಣಿಸುವಾಗ ಕಂಡದ್ದು ಸ್ವಲ್ವ ಅಚ್ಚರಿ ತಂದಿತು. ಸಾಮಾನ್ಯವಾಗಿ ಬೆಳಗ್ಗೆ, ಸಂಜೆ ದಿನಪತ್ರಿಕೆಗಳನ್ನು ಹಿಡಿದು ಪೇಪರ್... ಪೇಪರ್ ಅಂತ ಕೂಗಿ ಮಾರುವವರಿದ್ದಾರೆ.
ಆದರೆ ತನ್ನ ಎರಡೂ ಕೈಗಳಲ್ಲಿ ಎದೆತುಂಬಿಕೊಳ್ಳುವಷ್ಟು ಪುಸ್ತಕಗಳನ್ನು ಒಂದು ಬೋಗಿಯ ಜನಕ್ಕೆ ಏನೂ ಮಾತಾಡದೆ ಅವರ ಕೈಗೆ ಪುಸ್ತಕಗಳನ್ನು ಕೊಟ್ಟು ಮುಂದೆ ಹೋಗುವುದು. ಆ ಪುಸ್ತಕಗಳನ್ನು ಅವರು ತಮ್ಮ ಅಕ್ಕಪಕ್ಕದವರಿಗೆ ಕೋಡುತ್ತಾರೆ, ಇಲ್ಲವೆ ಆಸಕ್ತರು ತಾವೇ ತೆಗೆದುಕೊಂಡು ನೋಡುತ್ತಾರೆ. ಬೇಕಾದ ಪುಸ್ತಕಗಳನ್ನು ಕೊಂಡುಕೊಳ್ಳುತ್ತಾರೆ. ಮಿಕ್ಕುಳಿದ ಪುಸ್ತಕಗಳನ್ನು ಅದೇ ರೀತಿ ಮುಂದಿನ ಬೋಗಿಗೆ ಪಾಸ್ ಮಾಡುವುದು. ಹೆಚ್ಚಿಗೆ ಮಾತೇ ಇಲ್ಲ. ಪುಸ್ತಕ... ಪುಸ್ತಕ.. ಬುಕ್ ಬುಕ್... ಅಂತ ತಮ್ಮದೇ ಸ್ಟೈಲ್ ನಲ್ಲಿ ಕೂಗುವ ಪ್ರಮೇವವೇ ಇಲ್ಲ. ಅದು ನನಗೆ ನಿಜವಾಗಿಯೂ ಸಂತೋಷ ಆಯಿತು.
ಅದರಲ್ಲಿ ಆತನು ಕನ್ನಡ ಪುಸ್ತಕಗಳನ್ನು ಮಾರುತ್ತಿದ್ದುದು ನನಗೆ ಇನ್ನು ಸಂತಸ ತಂದಿತು.
ಆಗ ಕೂತೂಹಲದಿಂದ ನನ್ನ ಬೋಗಿಗೆ ಬಂದಾಗ ಮಾತಿಗೆಳೆದೆ. ಮಾತಾಡಲಾರಾಂಭಿಸಿದೆ.
ನಾನು ಕೊಂಚ ಎಕ್ಡೈಟ್ ಆಗಿ
ಯಾಕೆ ಪುಸ್ತಕಗಳನ್ನು ಮಾರುತ್ತಿದ್ದೀಯಾ? ಬೇರೆ ಏನಾದರೂ ಮಾರಬಹುದಲ್ಲ. ಹೆಚ್ಚು ದುಡ್ಡು ಸಿಗುತ್ತಲ್ಲ ಅಂದೆ.
ಇಲ್ಲ ಸಾರ್. ನಾನು ಸುಮಾರು ಏಳು ವರುಷಗಳಿಂದಲೂ ಇದೇ ಮಾರುತ್ತಿದ್ದೇನೆ. ಎಲ್ಲರೂ ತಿಂಡಿ, ತಿನಿಸುಗಳನ್ನು ಮಾರುತ್ತಾರೆ. ನಾನು ಪುಸ್ತಕಗಳನ್ನು ಮಾರಬಹುದಲ್ವಾ ಅಂದುಕೊಂಡು ಮಾರಲು ಶುರು ಮಾಡಿದೆ.
ನಾನು 7ನೇ ಕ್ಲಾಸಿಗೆ ಓದು ಬಿಟ್ಟೆ. ದುಡಿಯಲೂ ಬೇರೇ ಏನೂ ತೋಚಲಿಲ್ಲ. ಇದನ್ನೇ ವೃತ್ತಿ ಮಾಡಿಕೊಂಡೆ.
ಇದರಲ್ಲಿ ಲಾಭ ಬರುತ್ತಾ? ಅಂತ ಕೂಡಲೇ ಪ್ರಶ್ನೆ ಮಾಡಿದೆ.
ಪರವಾಗಿಲ್ಲ. ದಿನಕ್ಕೆ ನೂರು, ನೂರೈವತ್ತು ಉಳಿಯುತ್ತೆ ಅಂದ.
ನನಗೆ ಕೂತೂಹಲ ತಡಯಲಾಗಲಿಲ್ಲ... ನಾನು ಲೋಕಲ್ ನ್ಯೂಸ್ ಪೇಪರ್ ರಿಪೋರ್ಟರ್. ನಿನ್ನದೊಂದು ಪೋಟೋ ತೆಗೀಲಾ ಅಂದೆ.
ಕೂಡಲೇ ನನ್ನ ಕತೆ ಮುಗೀತು. ಸಾರ್. ದಯವಿಟ್ಟು ಬೇಡ... ಸಾರ್. ಪೇಪರ್ಗೆ ಬಂದು ನನ್ನ ಈ ವೃತ್ತಿಗೂ ಕುಂದು ತರಬೇಡಿ ಅಂತ ಕೈಯಲ್ಲಿದ್ದ ಪುಸ್ತಕಗಳನ್ನು ಕಸಿದುಕೊಂಡ.
ದಯವಿಟ್ಟು ಕ್ಷಮಿಸಿ. ಮಾತಾಡಿ ಆದ್ರೆ ಫೋಟೋ ಬೇಡ ಅಂದ.

ನನಗಾಗ ನಿಜವಾಗಿಯೂ ಅಯ್ಯೋ ಅನಿಸಿತು. ಬದುಕು ಎಷ್ಟು ದುರ್ಬರ. ಸುಮಾರು ಏಳು ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಮಾರುತ್ತಿದ್ದ ಪುಸ್ತಕೋದ್ಯಮಿ ಜೀವನದ ಅಭದ್ರತೆ ಪ್ರತಿ ದಿನವೂ ಕಾಡುತ್ತೆ. (ರೈಲ್ವೆಯಲ್ಲಿ ಆ ರೀತಿ ಪರ್ಮಿಶನ್ ಇಲ್ಲದೇ ಮಾರುವ ಹಾಗಿಲ್ಲ ಅಂತೆ!)
ನಿಜ ಹೇಳಿ ಪುಸ್ತಕವನ್ನು ನೋಡಿ, ಓದಿ ಕೊಂಡುಕೊಳ್ಳಲು ಹಿಂದು ಮುಂದು ನೋಡುವ ಈ ಕಾಲದಲ್ಲಿ ಪುಸ್ತಕಗಳನ್ನು ಮಾರಿಯೇ ಜೀವನ ಸಾಗಿಸುವವನು ನನಗೆ ಶ್ರೇಷ್ಠ ಅನಿಸ ತೊಡಗಿದ. ಜೀವನದಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು ಬದುಕುತ್ತಾರೆ. ಆದರೆ ಈ ರೀತಿ ತನ್ನ ಬದುಕನ್ನು ಕಟ್ಟಿಕೊಳ್ಳುವವರು ಕೆಲವರು ಮಾತ್ರ!
ನೀವೆಂದಾದರೆ ಬೆಂಗಳೂರು-ಹುಬ್ಬಳ್ಳಿ ಇಂಟರ್ಸಿಟಿ ರೈಲಿನಲ್ಲಿ ಆ ಪುಸ್ತಕೋದ್ಯಮಿ ಸಿಕ್ಕರೆ ನನ್ನ ನಮನ ತಿಳಿಸಿ!!!

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2