Monday, June 13, 2011

ನನ್ನವಳೆನಿಸಿಕೊಂಡಿದ್ದ ಹುಡುಗಿಗೆ ಒಲವಿನ ಪತ್ರ





ಬಹುಶಃ ಇನ್ನೆಂದು ನಿನಗೆ ಪತ್ರ ಬರೆಯಲಾರೆ. ಹಾಗಂದುಕೊಂಡಿದ್ದೆ. ಅದೇಕೋ ಬರೀಬೇಕು ಅನಿಸ್ತಿದೆ. ಬರಿತಿದೀನಿ. ಬರೆದ ಪತ್ರ ನಿನಗೆ ತಲುಪುತ್ತಾ? ತಿಳಿಯದು. ಅದು ಸಿಕ್ಕರೆ ಮತ್ತೊಂದು ರಾಮಾಯಣವೇ ನಡೆದೀತು. ಅಸಲಿಗೆ ಹೀಗೆ ಮೇಲೆ ನೀಲಿ ಆಕಾಶ ಕಾಣದ ಕತ್ತಲ ಕೋಣೆಯಲ್ಲಿ ಯಾಕೆ ಬರೆಯಲು ಶುರು ಮಾಡಿದೆ. ನಿನಗೆ ನೀಲಿ ಆಕಾಶಂದ್ರೆ ಪಂಚ ಪ್ರಾಣಂತ ಗೊತ್ತು. ಆದ್ರೆ ಈ ಕತ್ತಲಿನ ಮಧ್ಯೆ ಚುಕ್ಕೆಯ ಬೆಳಕಿನಾಸರೆಯಲ್ಲಿ ಹೊರಟಿರುವ ನಾ ದೇವದಾಸನ? ಉಹುಂ. ಗೊತ್ತಿಲ್ಲ.
ನಿಂಗೇನು ಕೆಲಸ ಇದೇಂತ ಪ್ರೀತಿಸಲೋ. ಇನ್ನು ನಾನು ನಿನ್ನ ಪ್ರೇಮಿಸಲಾರೆ ಎಂದಾಗ ಟಪಾರನೆ ಕೆನ್ನೆಗೆ ಒಡೆದ ಅನುಭವ. ಹೊರ ಪ್ರಪಂಚವೆಲ್ಲ ದೊಡ್ಡದಾಗಿ ಮಾತಾಡ್ತಿದ್ರೂ ನನ್ನ ಒಡೆದ ಕಿವಿಗಳಲ್ಲಿ ಕೇಳಿಸಲು ಅರಗಿಸಿಕೊಳ್ಳದ ಅಸಹನೆ. ಗುಯ್ ಅನ್ನೋ ಶಬ್ದ ಮಾತ್ರ ಒಂದೇ ಸಮನೆ ದೊಡ್ಡದಾಗಿ ಮೃದಂಗ ಬಾರಿಸುತ್ತಿತ್ತು. ಏಕಾಂತದ ಸಮಯದಲ್ಲೂ ಅದೇನು ಗಿಜಿಗಿಡುವ ಶಬ್ದದ ಪರಿಚಯ. ಅರೆ ಇಷ್ಟೆಲ್ಲ ಆದಮೇಲೂ ಯಾಕೆ ನಿನ್ನ ನೆನಪು. ಪದೇ ಪದೇ ನಿನ್ನ ನೆನಪು ಮಾಡಿಕೊಂಡು ಯಾಕೆ ತೊಟ್ಟಿಲು ತೂಗಬೇಕು. ಬಹುಶಃ ಪ್ರೀತಿಯ ಬೆಸುಗೆಯ ದಿನಗಳು ನೆನಪಾದವಾ? ಉಹುಂ. ಅದೂ ಇಲ್ಲ.
ಮನೆಯ ಟೆರಿಸಿನ ಮೇಲೆ ಯಾರೂ ಇಲ್ಲದ ಸಮಯದಲ್ಲಿ ನಾ ನಿನ್ನ ಇಷ್ಟಪಡ್ತೀನಿ. ನಿಜವಾಗ್ಲೂ ದೊಡ್ಡ ಟ್ಯೂಬ್‌ಲೈಟ್ ಗೂಬೆ ಎಂದು ನೀ ನಲುಮೆಯಿಂದ ನೀಲಿ ಆಕಾಶ ನೋಡ್ತಾ ಹೇಳ್ತಿದರೆ ನಾ ಕಸಿವಿಸಿಗೊಂಡು ಸೀದ ಹೋಗಿ ಅಂದು ಅಮ್ಮನಿಗೆ ಆದಲ್ಲವನ್ನು ಹೇಳಿದವನು. ಅದೆಲ್ಲದರ ಮೆಲುಕು ಹಾಕ್ತಿದೀನಾ. ಇಲ್ಲ. ಬಹುಶಃ ಅದಲ್ಲ ಬಿಡು.
ಏನೂ ಕಾರಣವಿಲ್ಲದೆ ಹುಟ್ಟಿಕೊಂಡ ಈ ಪ್ರೀತಿ ಎಂಬ ಎರಕ್ಷರದ ಮೋಹ ಮಾಯೆಗೆ ಏನೂಂತ ಹೇಳಲಿ.
ನೀ ನನಗೊಲ್ಲೆ ಎಂದು ಫೋನನಲ್ಲಿ ರಾಗ ತೆಗೆದಾಗ ನಾ ಚೀರಿದವನಲ್ಲ. ಸುಖಾಸುಮ್ಮನೆ ಕುಡಿದು ಗಲಾಟೆ ಮಾಡಿದನಲ್ಲ. ನನ್ನ ಪಾಡಿಗೆ ನಾ ಎಸ್‌ಟಿಡಿ ಬೂತಿನಲ್ಲಿ ಕಸ್ಟಮರ್ ಹೇಳಿದ ನಂಬರ್‌ನ್ನು ಕಣ್ಣುಮುಚ್ಚಿ ಟಕಟಕನೆ ಒತ್ತಿ ಫೋನು ಕೊಟ್ಟು ಸಿನ್ಸಿಯರ್ ಆಗಿ ಕೆಲಸ ಮಾಡಿದೋನು.
ನಮ್ಮಪ್ಪ ನಿನ್ನ ಮದುವೆ ಕಾರ್ಡನ್ನ ನಮ್ಮನಿ ತಂತಿಗೆ ನೇತುಹಾಕಿದ್ದು ನೋಡಿದಾಗ ಅದೇನೋ ತಹತಹನೆ. ಗಾಳಿಗೆ ಕಾರ್ಡ್ ಹಾರುತ್ತಿದ್ದರೆ ಬಿರುಗಾಳಿ ಬಂದು ದೂರ ಹಾರಿಹೋಗಲಿ ಎಂದು ಎಲ್ಲೋ ಆಶಿಸಿದವನಾ? ಅದೊಂತರ ಹೇಳಲಾರದ ಭಾವ ಬಿಡು. ನನಗೆ ಅಂಥ ಇದ್ದ ಒಂದೇ ಒಂದು ಪ್ರೀತಿಯ ದಾರಿ ಕವಲೊಡೆಯುತ್ತಿದೆ.
ಹಾಗಂತ ಇಷ್ಟೆಲ್ಲವಾದ ಮೇಲೆ ನಾನೇನು ಖಿನ್ನನಾದೆನಾ? ನೋ. ನೆವರ್... ಅತ್ತೆನಾ.. ಕಣ್ಣೀರಿನ ಅಳುಮುಂಜಿಯಾದೆನಾ?॒ ಉಹುಂ. ಇಲ್ಲ.
ಬಂದ ಬದುಕನ್ನು ಒಂದೇ ಕೈಯಲ್ಲಿ ಚಾಚಿದೋನು. ಇನ್ನೊಂದು ಕೈ ಮಾತ್ರ ಯಾಕೆ ನನ್ನ ಪೀಡಿಸಿ ಪ್ರೀತಿಸಿದೆ ಅಂತ ಗಾಳಿಯಲ್ಲಿ ತೇಲುತ್ತ ಕೇಳುತ್ತಿತ್ತು. ನನಗೀಗಲು ಅರ್ಥವಾಗದೆ ಸತ್ಯ ಅಂದ್ರೆ ಯಾಕೆ ನೀ ನನ್ನನ್ನೇ ಪ್ರೀತಿಸಿದೆ. ನನಗೆ ಖಂಡಿತ ಗೊತ್ತು. ನೀ ನನ್ನನ್ನು ವರಿಸಿದಂತೆ ಎಂದೂ ನಾಟಕವಾಡಲಿಲ್ಲ. ಮನಸಾರೆ ಪ್ರೀತಿಸಲು ಎಷ್ಟು ಸಾಧ್ಯವೋ ಅಷ್ಟು ಮಾಡಿದೆ. ಇಷ್ಟೆಲ್ಲ ಆದಮೇಲೆ ನನಗೀ ಆಟ ಇಷ್ಟವಿಲ್ಲ ಅನ್ನುವಂತೆ ಚಿಕ್ಕಮಕ್ಕಳ ಹಾಗೆ ಚಕ್ಕನೆ ಎದ್ದು ಹೋಗಿಬಿಟ್ಟೆ. ಇದಕ್ಕೆ ನಿಮ್ಮಪ್ಪಮ್ಮ ಹೆದರಿಸಿದರಾ.. ಅದಲ್ಲ...
ನಾ ಯಾವ ಕೆಲಸಕ್ಕೂ ಬಾರದವನು ಅನ್ನೋ ನಿನ್ನ ತುಡಿತನಾ? ಇದಾವುದು ಆಗಿರಲಿಕ್ಕಿಲ್ಲ.
ಒಲ್ಲೆ ಅಂದಕೂಡಲೇ ಮಾವನ ಮಗನ ಜೊತೆ ನೀ ಮದುವೆಗೆ ಒಪ್ಪಿದ್ರೆ ಬೇಜಾರುಗುತ್ತಿದ್ದಿಲ್ಲ. ಒಳ್ಳೇ ಕೆಲಸ ಮಾಡಿದೆ ಎಂದು ಸುಮ್ಮನಾಗುತ್ತಿದೆ. ನನಗಾಗಿ ಕಾದು ಕಾದು ನೀ ಬೇರೆಯವರ ಜೊತೆಗೆ ಒಲ್ಲದ ಮದುವೆಯಾದೆ.
ಹಿಮಪರ್ವತಗಳಂತ ಬದುಕಿನಲ್ಲಿ ನಾ ಒಂದೇ ಬೆಟ್ಟ ಹತ್ತುವಾಗಲೂ ನೀ ನನ್ನ ಸನಿಹದಲ್ಲಿದ್ದೆ ಅನ್ನೋ ಭಾವನೆ. ನಾನೀಗ ನೀನಂದುಕೊಂಡಂತೆ ಹಿಮಗಿರಿ ಪರ್ವತದ ಮೇಲೇಯೇ ಇದ್ದೇನೆ. ಆದ್ರೆ ಅದ ನೋಡಲು ನೀನಿಲ್ಲ. ಬಹುಶಃ ನನ್ನ ಯಶ ಕಾಣಲು ನೀ ಒಲ್ಲೆ ಅನ್ನೋ ನಾಟಕವಾಡಿದೆಯಾ? ಒಲ್ಲದ ಎರಡನೇ ಹೆಂಡತಿಯಾಗಿ ಬದುಕುತ್ತಿದ್ದೀಯಂತೆ? ಹಿರಿ ಮಗನಿಗೆ ನನ್ನ ಪ್ರೀತಿ ಹೆಸರಿಟ್ಟರೆ ಅದೆಲ್ಲಿ ನನ್ನ ನೆನಪಾಗಿಬಿಡುತ್ತೋ ಅನ್ನೋ ಭಯ ಕಾಡುತ್ತಿದ್ದಿಯಾ? ಸುಳ್ಳೇ ಟೊಯೋಟಾ ಕಾರಲ್ಲಿ ಹಂಗೋಗಿ ಹಿಂಗೆ ತವರು ಮನಿಗೆ ಬಂದ್ರೆ ನೀ ಬಲು ಖುಷಿ ಜಿಂದಗಿ ನಡೆಸ್ತಿದಿಯಾ ಅಂದುಕೊಂಡುಬಿಟ್ಟಿದಿಯಾ?
ಮೊದಲು ನೆಗೆಟಿವ್ ಆಗಿ ಯೋಚಿಸು, ಆಮೇಲೆ ಪಾಸಿಟಿವ್ ಆಗಿರು ಮುದ್ದು ಎನ್ನುವ ನಿನ್ನ ಮಾತಿಗೆ ನೀನೇ ತಲೆದೂಗಿದೆಯಾ? ಯಾಕೀಗ ಹೊತ್ತಲ್ಲದ ಹೊತ್ತಲ್ಲಿ ನಿನಗೆ ಪ್ರಶ್ನೆಗಳ ಸುರಿಮಳೆ. ನಾನೆಷ್ಟು ನಿನ್ನ ನೆನಪಿಸಿಕೊಂಡರೂ ನೀ ಸಿಗಲಾರೆ. ಅಸಲಿಗೆ ನನಗೆ ಪ್ರೀತಿಸಿದ ಮಧುರ ಕ್ಷಣಗಳ ಕಣ್ಮುಂದೆ ಬಾರುತ್ತಿಲ್ಲ. ನಾನೆಷ್ಟು ಗಟ್ಟಿಯಂದ್ರೆ ನಿನ್ನ ಮದುವೆ ದಿನ ನಾ ಇಂಟರ್‌ವ್ಯೂನ ಎಲ್ಲ ಸೆಕ್ಷನ್‌ಗಳಲ್ಲೂ ಪಾಸಾಗಿದ್ದೆ. ಅಂದು ಬಸ್‌ನಲ್ಲಿ ಜರ್ನಿ ಮಾಡ್ತಾ ನನಗೆ ಗೊತ್ತಾಗದೇ ಕಣ್ಣೀರ ಹನಿ ಹಿಂಬದಿಯ ಮುದ್ದುಮೊಗದ ಹುಡುಗಿಯ ಸೀಟಿನಲ್ಲಿ ಸಿಂಚಿಸುತ್ತಿತ್ತು. ಮಳೆ ಬರ್‍ತಿದಿಯಾ ಎಂದು ನಗುಮುಖದಿಂದ ಕೇಳಿದಾಗ ತಕ್ಷಣ ನಾನವಳಲ್ಲಿ ನಿನ್ನನ್ನು ಹುಡುಕಿದೆ. ಸಿಗಲಿಲ್ಲ ನೀನು.
ನೀ ಕೇವಲ ನೀನೇ. ನನಗೊತ್ತು ಈ ಪತ್ರ ನಾ ನಿನಗೆ ತಲುಪಿಸೋ ಮನಸೇ ಮಾಡಲ್ಲ. ಸಿಕ್ಕಿದೆ ಬಾ ಎಂದು ಅಕ್ಷರಗಳ ಜೊತೆ ಆಟವನ್ನೂ ಆಡುತ್ತಿಲ್ಲ. ಆದ್ರೆ ಇದೆಲ್ಲವನ್ನು ಹೇಳಿಕೊಂಡ್ರೆ ಮನಸು ಭಾರವೂ ಕಡಿಮೆಯಾಗುವುದಿಲ್ಲ. ಹೇಳಿಕೊಂಡಷ್ಟು ಹೆಚ್ಚಾಗುವ ಒಲುಮೆ ಇದು. ಈ ಸಂಯಮದ ನನ್ನೊಲವಿಗೆ ಸದಾ ನಾ ಫಿದಾ ಆಗಿದ್ದೇನೆ. ಖಂಡಿತ ನಿನ್ನ ನೆನಪಿಸಿಕೊಂಡ ಕೂಡಲೇ ಈಗಲೂ ನಿನ್ನ ಮುಖಚರ್ಯೆ ಕಣ್ಣೆದುರಿಗೆ ಬರಲ್ಲ. ಬದಲಾಗಿ ನೆರಿಗೆ ಲಂಗ ಉಟ್ಟುಕೊಂಡ ಚಿಕ್ಕ ಹುಡುಗಿ ನನ್ನ ಕೈ ಹಿಡಿಯುವ ನೆನಪಾಗುತ್ತೆ. ಸಾಕಷ್ಟು ಬಾರಿ ಕಷ್ಟಪಟ್ಟು ನೆನಪು ಮಾಡಿಕೊಂಡಿದ್ದೇನೆ. ನೀ ನನಗೆ ಕೊಟ್ಟ ಚೆಂದನೆಯ ಫಸ್ಟ್ ಫೋಟೋ ಎದುರಿಗಿಟ್ಟುಕೊಂಡು ನೋಡಿ ಕಣ್ಣುಮುಚ್ಚಿದರೆ ನೆನಪಾಗೋದು ಮತ್ತದೆ ನೆರಿಗೆ ಲಂಗವುಟ್ಟ ಚಿಕ್ಕ ಹುಡುಗಿ ಕೈಯ ಕಲರವ. ಆ ಹುಡುಗಿ ನನ್ನ ಮೇಲೆ ಪ್ರೀತಿಯಿಂದ ಸಹಾಯಹಸ್ತವ ಚಾಚುತ್ತಿದ್ದಳು ಅಷ್ಟೆ. ನಿನ್ನೆ ನೆನಸಿಕೊಂಡ್ರೆ ಇದು ಪದೇ ಪದೇ ನೆನಪಾಗ್ತಿತ್ತು. ಅದೇನೋ. ಅದೇಕೋ ಆ ಬೆಳದಿಂಗಳ ಪುಟ್ಟ ಬಾಲೆಯೇ ನೆನಪಾಗುತ್ತಾಳೆ.

ರೂಮ್ ಹೊರಗಡೆ ನನ್ನ ಮಗಳು ಪೂರ್ಣಿ ಒಂದೇ ಸಮನೆ ಕೂಗ್ತಿದಾಳೆ. ಅವಸರದಲ್ಲಿ ಬರೆದ ಈ ಪತ್ರವನ್ನೂ ಕತ್ತಲಕೋಣೆಯ ಬುಟ್ಟಿಯಲ್ಲಿಡಲು ಹೊರಟೆ. ನೆರಿಗ ಲಂಗ ತೊಟ್ಟ ಪೂರ್ಣಿ ಬಾಗಿಲು ನೂಕಿ ಬಾಪ್ಪ ॒ಗಾಳಿಪಟ ಹಾರಿಸೋಣ. ಸಕತ್ ಗಾಳಿಯಿದೆ. ಆಕಾಶ ಮೋಡದ ಮರೆಯ ನೀಲಿ ಬಣ್ಣದಲ್ಲಿ ಸೂಪರ್ ಆಗಿ ಕಾಣ್ತಿದಾನೆ ಎಂದು ಕೈ ಹಿಡಿದು ಜಗ್ಗುತ್ತಿದ್ದಾಳೆ.
ಇಂತಿ
ನಿನ್ನವನೆನಸಿಕೊಂಡಿದ್ದ ಹುಡುಗ

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2