Tuesday, October 7, 2008

ವಿಜಯ ಕರ್ನಾಟಕದಲ್ಲಿ ಪ್ರಕಟವಾದದ್ದು

ಪ್ರಕಾಶನೂ ಮತ್ತು ಪಾಪುವೂ

ಈ ಪರೀಕ್ಷೇನಾ ಯಾರ ಕಂಡುಹಿಡಿದ್ರೋ, ಆ ನನ್ಮಕ್ಳನ್ನ ಹೊಡೀಬೇಕು ನನ್ನ ಪ್ರಾಣ ತಿಂತಾವೆ ಎಂದು ಪ್ರಕಾಶ ಒಟಗುಡುತ್ತ ಪುಸ್ತಕದ ಧೂಳನ್ನು ಬಡೆದಾಗ ಇಡೀ ಧೂಳೆಲ್ಲ ಅವನನ್ನು ಉಸಿರಿಗಟ್ಟಿಸಿತು. ಮೂಗು ಮುಚ್ಚಿಕೊಂಡು ಎಷ್ಟು ತಿಂಗಳಾಗಿತ್ತೋ ಈ ಪುಸ್ತಕಗಳನ್ನು ಹೊರತೆಗ್ದು.ಅಯ್ಯೋ ದೇವರೇ  ನಾಳೇನೆ ಎಕ್ಸಾಮ್. ಸರಿಯಾಗಿ ಓದಿಲ್ಲ. ಬರೀ ಊರೂರು ತಿರುಗೋದು ಆಯಿತು. ಇನ್ನು ಬೆಳಕು ಕಾಣದ ಹುಡುಗಿಯರ ಜೊತೆ ಓಡಾಟ ಬೇರೆ ಎಂದು ತನ್ನನ ತಾನೇ ಬೈದುಕೊಂಡ.
ಲೇ ಪ್ರಕಾಶ ನಾಳೆ ಎಕ್ಸಾಮ್ ಇಟ್ಗಂಡು ಏನ್ ಆಕಾಶ ನೋಡ್ತಿ, ಅದು ನೀಲಿ ಬಣ್ಣಾನೇ ಇರುತ್ತೆ ಎಂದೂ ಕೆಂಪಾಗೋದಿಲ್ಲ. ಮೊದ್ಲು ಪುಸ್ತಕ ತೆಗೆದು ಓದ್ಲೇ ಅಂತ ಅವರಣ್ಣ ಅಂದಾಗ ಇವನು ನನ್ನ ಆಜನ್ಮ ಶತ್ರುವೇನೋ ಅನ್ನೋ ರೀತಿ ಕಂಡ. ಹೋದ ಜನ್ಮದಲ್ಲಿ ನನ್ಗೆ ಇವು ಶತ್ರುವಾಗಿರಬೇಕು. ಅದ್ಕೆ ಈ ಜನ್ಮದಲ್ಲಿ ಅಣ್ಣನಾಗಿ ಬಂದು ರಿವೇಂಜ್ ತೀರಿಸ್ಕಂತಿದ್ದಾನೆ. ಎಂದಾದರೂ ನನ್ನಣ್ಣ ಖರ್ಚಿಗೆ ದುಡ್ಡು ಬೇಕೇನ್ಲೆ ಅಂತ ಕೇಳಿದ್ದು! ಉಹುಂ. ದೇವ್ರೇ ನನ್ಗೆ ಮುಂದಿನ ಜನ್ಮದಲ್ಲಾದ್ರೂ ಅಣ್ಣತಮ್ಮರನ್ನು ಕೊಡಬೇಡ. ಮನೆಗೆ ನಾನೊಬ್ಬನೇ ಇರಲಿ. ನನ್ಗೇ ಎಲ್ಲ ಪಾಕೆಟ್‌ಮನಿ ಸಿಗಲಿ ಅಂತ ಮೊರೆ ಮಾಡಿಕೊಂಡ.
ನಾಳೆ ಇರೋದೆ ಇಂಗ್ಲಿಶ್ ಸಬ್ಜೆಕ್ಟ್. ಇದೇ ಲಾಸ್ಟ್ ಸಬ್ಜೆಕ್ಟ್ ಅಂತಂದ್ಕಂಡು ಅರವಿಂದ್ ಸಾರ್ ನೋಟ್ಸ್ ತಿರಿವಿಹಾಕ್ದ. ಅವು ಓದೋ ಪರಿ ನೋಡಬೇಕು. ಒಳ್ಳೆ ಎಂಬಿಬಿಎಸ್ ಸ್ಟೂಡೆಂಟ್ ಕೂಡ ಅಷ್ಟು ವೈನಾಗಿ ಓದಲಿಕ್ಕಿಲ್ಲ. ಅವು ಓದಲು ಸ್ಟಾರ್‍ಟ್ ಮಾಡಿದನಂದ್ರೆ ಇಡೀ ಮನೆಯ ಎಲ್ರೂ ಎಕ್ಸಾಮ್‌ಗೆ ಓದ್ತಿದಾರೆ ಅನ್ನೋ ರೀತಿ ಸೀನ್ ಕ್ರಿಯೇಟ್ ಮಾಡ್ತಿದ್ದ. ಅವನು ಓದಲು ಸ್ಟಾರ್‍ಟ್ ಮಾಡಿದ್ರೆ ಮನೆಯ ಮಾತುಗಳು ಬಂದ್, ಟಿ.ವಿ. ಬಂದ್ ಕೊನೆ ಪಕ್ಷ ಆ ಓಣಿಯ ಈಶ್ವರ ಗುಡಿಯ ಮೈಕ್‌ನಲ್ಲಿ ಬೆಳಗಿನ ಸುಪ್ರಭಾತ ಕೂಡ ಕಡಿಮೆ ಸೌಂಡ್ ಇಡ್ಬೇಕು. ಆ ರೀತಿ ಮಾಡ್ತಿದ್ದ.
ಇನ್ನೇನು ಪರೀಕ್ಷೆ ಮಟಮಟ ಮಧ್ಯಾಹ್ನ ಇದ್ದದ್ದು. ಹಾಗಾಗಿ ಸರಿಯಾಗಿ ಹನ್ನೆರಡುವರೆಗೆ ಬಸ್‌ಸ್ಟಾಂಡಿಗೆ ಬಂದಿದ್ದ. ಯಾಕೆಂದರೆ ಅವನ ಕಾಲೇಜ್ ಇದ್ದದ್ದು ತನ್ನ ಊರಿನಿಂದ ೧೮ ಕಿ.ಮೀ ದೂರದ ಪಟ್ಟಣದಲ್ಲಿ. ಹಾಗಾಗಿ ಯಾಕಿದ್ದೀತು ಅಂತ ಸ್ವಲ್ಪ ಮುಂಚೇನೇ ಬಂದಿದ್ದ. ತಾನು ಬಂದಾಗ ಬಸ್‌ಸ್ಟ್ಯಾಂಡ್ ಸ್ಮಶಾನಮೌನ. ಮಧ್ಯಾಹ್ನ ಯಾವಾಗಲೂ ಹೀಗೇನೇ ಇರುತ್ತೆ ಅಂತಂದ್ಕಂಡ. ನಿಧಾನವಾಗಿ ಅವನ ಫ್ರೆಂಡ್ಸೆಲ್ಲ ಬಂದ್ರು. ಅದ್ರಲ್ಲಿ ಅವನ ಬೆಳಕು ಕಾಣದ ಗರ್‍ಲ್ ಫ್ರೆಂಡ್ಸ್ ಇದ್ರು. ಎಲ್ರೂ ಬಸ್‌ಗಾಗಿ ಕಾಯ್ತಾ ಕೂತರು. ಅರ್‍ಧ ಗಂಟೆ ಆಯ್ತು ಒಂದು ಬಸ್‌ನ ಸುಳಿವಿಲ್ಲ. ಅದರ ಶಬ್ದವೂ ಕೂಡ ಇಲ್ಲ. ಆ ಟೈಮಿಗೆ ದಿನಬರೋ ಗಿಳಿ ಬಸ್ ಬಂದಿದ್ದಿಲ್ಲ.
ಆಗಲೇ ಒಂದು ಗಂಟೆಯಾಗಿತ್ತು. ಬಸ್‌ಸ್ಟ್ಯಾಂಡ್ ನೋಡಿದ್ರೆ ತುಂಬಿಬಿಟ್ಟಿತ್ತು. ಅಲ್ಲಿ ನೆರೆದಿದ್ದವರಲ್ಲಿ ಬರೀ ಎಕ್ಸಾಮ್ ಬರೆಯೋರು ಅಲ್ಲದೆ, ಹಳ್ಳಿ ಹುಡುಗ್ರು, ಹಾಲು ಮಾರೋರು, ಆಪಿsಸ್‌ಗೆ ಅರ್ಧ ರಜೆ ಹಾಕಿ ಕೆಲಸಕ್ಕೆ ಹೋಗೋರು, ದೂರದ ಊರಿಗೆ ಹೋಗೋರು ಕೂಡ ನೆರೆದಿದ್ದರು. ಇವರೆಲ್ಲರಿಂದ ಬಸ್‌ಸ್ಟಾಂಡ್ ತುಂಬಿ ತುಳುಕುತ್ತಿತ್ತು. ಇವರನ್ನೆಲ್ಲ ನೋಡಿ ನಾನು ಇಂದು ಎಕ್ಸಾಮ್ ಬರೆಯಲು ಸರಿಯಾದ ಟೈಮಿಗೆ ಹೋಗ್ತೀನಾ? ಅಂತ ಕೈ ಗಡಿಯಾರ ನೋಡ್ತಾ ಕೂತ.
ಅಲ್ಲಿಯೇ ನೆರೆದಿದ್ದ ಮುದುಕ 'ಏನಪ್ಪ ಹುಡುಗ ಗಿಳಿ ಬಸ್ ಬಂದಿಲ್ಲೇನು' ಅಂತ ಪ್ರಕಾಶನಿಗೆ ಕೇಳಿದಾಗ, ಇನ್ನೂ ಬಸ್ ಬರದೆ ಇರೋ ಸಿಟ್ನಲ್ಲಿ 'ಬಂದಿಲ್ಲ ತಾತ' ಎಂದು ಗದರಿಸಿದ. ಏನಪ್ಪ ಹೀಗ್ ಗದರ್‍ಸಿತಿದಿ. ಸ್ವಲ್ಪ ಮೆಲ್ಲಕ ಹೇಳಪಾ ಈ ತಿಂಗಳ ತಾನೆ ನನ್ನ ಕಿವಿಗೆ ಆಪರೇಷನ್ ಮಾಡ್ಸಿದೀನಿ ಅಂತ ಎಲ್ರೆದರು ಬೈದ. ಸುಮ್ನಿರು ತಾತ ನಂದೇ ನನಗಾಗಿದೆ ಅಂತಂದ ಪ್ರಕಾಶ. ಈಗಿನ ಹುಡುಗ್ರೇ ಹೀಗೆ ಎಂದು ಮುದುಕ ಗೊಣಗಿಕೊಳ್ಳಲಾರಂಬಿsಸಿದ.
ಅಂತೂ ಇಂತೂ ಬಂತು ಗಿಳಿ ಬಸ್. ಆ ಬಸ್ ಮೇಲೆ ಗಿಳಿ ಚಿತ್ರ ಇದ್ದಿದರಿಂದ ಗಿಳಿ ಬಸ್ ಅಂತ ನಮ್ಮೂರ ಜನ ಕರಿತಿದ್ದರು. ಈ ಬಸ್ ನೋಡಿದ್ರೆ ನಮ್ಮ ಕೊಟ್ಟೂರು ಜಾತ್ರೆಯಲ್ಲಿ ತೇರು ಬಂದಂಗ ಅಕ್ಕಡಿಗೆ ಇಕ್ಕಡಿಗೆ ವಾಲ್ತಾ ಬರುತ್ತಿತ್ತು. ಆ ಬಸ್ ಕುಂಟು ಕುಂಟೊಕಂತ ಬರ್‍ತಾ ಇದೆ ಏನೋ ಅನ್ನೋ ರೀತಿ ಅನಿಸ್ತಿತ್ತು. ಇವತ್ತು ನನ್ನ ಕಥೆ ಮುಗೀತು. ಈ ಬಸ್ ಇಷ್ಟು ಫುಲ್ ಆದ್ರೆ ಸಿಟೀಗೆ ಎಷ್ಟು ಗಂಟೆಗೆ ಮುಟ್ಟುತ್ತೋ ಅಂತಂದ್ಕಂಡ. ಬಸ್ ಬಸ್‌ಸ್ಟ್ಯಾಂಡಿನಲ್ಲಿ ನಿಲ್ಲೋದೆ ತಡ ಕಷ್ಟಪಟ್ಟು ಈ ಬಸ್‌ನಲ್ಲಿರೋ ಸೀಟು ತನ್ನ ಪಿತ್ರಾರ್ಜಿತ ಆಸ್ತಿಯೆಂಬಂತೆ ಕರ್ಚೀಪಿsನಿಂದ ಕಾಯ್ದಿರಿಸಿದ. ಬಸ್ಸಿನಲ್ಲಿ ಹುಡುಗರು, ಹುಡುಗೀರು, ಹೆಂಗಸರು, ಮುದೇರು ಅನ್ನದೆ ನೂಕುನುಗ್ಗಲಿನಲ್ಲಿ ಪ್ರಕಾಶ ತನ್ನ ಗುರಿಯಾದ ಸೀಟನ ಕಡೆಗೆ ಹೋಗಿ ಕಷ್ಟಪಟ್ಟು ಕೂತ. ಆಗ ಗೊತ್ತಾಗಿತ್ತು ಅವನಿಗೆ, ಅವನ ಷರ್ಟಿನ ಮೇಲಿನ ಎರಡು ಗುಂಡಿಗಳು ಈ ನೂಕುನುಗ್ಗಲಿನಲ್ಲಿ ಹರಿದುಬಿದ್ದಿದ್ದವು. ಅದನ್ನು ನೋಡಿ ಅವನಿಗೆ ಕೆಂಡಾಮಂಡಲ ಕೋಪ ಜನರನ್ನು ಬೈದುಕೊಂಡ. ಅಲ್ಲೇ ಪಕ್ಕದಲ್ಲೇ ಕೂತಿದ್ದ ಅಜ್ಜಿಯಿಂದ ಪಿನ್ ಇಸ್ಕಂಡು ಷರ್ಟಿಗೆ ಹಾಕಿಕೊಂಡ. ಕೊನೆಗೂ ಆ ರಶ್‌ಲ್ಲಿ ಸೀಟ್ ಸಿಕ್ಕಿದ್ದು ಅವನಿಗೆ ಗವರ್‍ನಮೆಂಟ್ ಜಾಬ್ ಸಿಕ್ಕಂಗಾಗಿತ್ತು.
ಮೊದ್ಲು ಬಸ್ ಸೇಮ್ ರಥದಲ್ಲಿ ಕೂತು ಅದನ್ನು ಯಾರೋ ನೂಕುತ್ತಿದ್ದಾರೋ ಅನ್ನೋ ರೀತಿ ಅನಿಸುತ್ತಿತ್ತು ಪ್ರಕಾಶನಿಗೆ. ಬಸ್‌ನಲ್ಲಿ ಇರೋ ಜನ ನನಗ್ಯಾರು ಸಂಬಂಧ ಇಲ್ಲ ಅನ್ನೋ ರೀತಿ ಅರವಿಂದ್ ಸರ್ ಇಂಗ್ಲಿಶ್ ನೋಟ್ಸ್ ಹೊರ ತೆಗ್ದು ಓದ್ತಾ ಕೂತ. ನೆಕ್ಸ್ ಸ್ಟಾಪ್‌ನಲ್ಲಿ ಒಬ್ಬ ಗೃಹಿಣಿ ತನ್ನ ಬಲ ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಬಸ್ ಹತ್ತಿದಳು. ಇಂಥ ರಶ್ಶಲ್ಲಿ ಈ ಹೆಣ್ಮಕ್ಕಳು ಯಾಕಾದ್ರೂ ಬಸ್ ಹತ್ತುತ್ತಾರೋ ಅಂತ ಮನಸಲ್ಲೇ ಗೊಣಗಿಕೊಂಡ. ಅದೂ ಮಗುವನ್ನು ಎತ್ತಿಕೊಂಡು! ಜಲ್ದಿ ಹೋಗಿ ಅದೇನು ಕಡಿತಾರೋ ಅಂತ ಬೈದುಕೊಂಡ. ಬಹುಶಃ ಅಲ್ಲಿಯ ನೆರೆದಿದ್ದವರ ಅಬಿsಪ್ರಾಯ ಕೂಡ ಅದೇ ಆಗಿತ್ತು.
ಆ ಗೃಹಿಣಿ ಬಲ ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು, ಎಡಗೈಯನ್ನು ಬಸ್ ಹಿಡಿಕೆ ಹಿಡಕೊಂಡು ನಿಂತಿದ್ದಳು. ಬಸ್‌ನ ವೇಗಕ್ಕೆ, ತಿರುವುಗಳಿಗೆ ಆ ಕಡೆ ಈ ಕಡೆ ವಾಲಿದಾಗ ಆ ಗೃಹಿಣಿ ಮತ್ತು ಪ್ರಯಾಣಿಕರು ಸರ್ಕಸ್ ಮಾಡ್ತಿದ್ದಾರೋ ಅನ್ನೋ ರೀತಿ ಕಾಣುತ್ತಿತ್ತು. ಆದರೆ ಆ ಗೃಹಿಣಿ ಕಂಕುಳಲ್ಲಿದ್ದ ಮುದ್ದಾದ ಮಗು ಮಾತ್ರ ಪ್ರಕಾಶನನ್ನು ದುರುಗುಟ್ಟು ನೋಡುವಂತಿತ್ತು. ಆ ಮಗುವನ್ನು ನೋಡಿ ಅವು ಒಂದು ಕ್ಷಣ ತನ್ನೆಲ್ಲ ಎಕ್ಸಾಮ್ ಟೆನ್ಷನ್ನೇ ಮರೆತುಬಿಟ್ಟ. ಆ ಮಗು ಅಷ್ಟು ಮುದ್ದಾಗಿತ್ತು. ಆ ಮಗುವು ಬಸ್‌ನ ತಿರುವಿನಲ್ಲಿ ಕಂಬಿಗೆ ಸ್ವಲ್ಪ ಹಣೆ ಬಡಿತಿತ್ತು. ಆಗಂತೂ ಅವನಿಗೆ ಮಗೂಗೇ ಏನಾಗುತ್ತೋ ಅಂತ ಗಾಬರಿಯಾಗ್ತಿದ್ದ.
ಹಳ್ಳಿ ಹಳ್ಳಿಯಲ್ಲಿ ಸ್ಟಾಪ್ ಮಾಡ್ತಾ ಜನ ಹತ್ತುತ್ತಾ, ಇಳೀತಾ ಸ್ವಲ್ಪ ನೂಕುನುಗ್ಗಲಿನಲ್ಲಿ ಆ ಗೃಹಿಣಿ ಪ್ರಕಾಶನು ಕೂತ ಸೀಟಿನ ಹತ್ತಿರವೇ ಬಂದಳು. ಆ ಮಗುವು ಅವನನ್ನೇ ನೋಡುತ್ತಿತ್ತು. ಅವನು ಆ ಮಗುವಿನ ಜೊತೆಗೆ ಆಗಲೇ ಮಾತಾಡುತ್ತಿದ್ದ. ಅದು ಬರೀ ಕಣ್ಣಿಂದ! ಕೊನೆಗೆ ಆ ಗೃಹಿಣಿಯ ಸ್ಥಿತಿ ನೋಡಿ ಸೀಟ್ ಬಿಟ್ಟುಕೊಡೋಣವೆಂದು ಎದ್ದೇಳುವಷ್ಟರಲ್ಲಿಯೇ ಆ ಗೃಹಿಣಿ ಸ್ವಲ್ಪ ಪಾಪುನ ಹಿಡುಕೋ ಅಂದಾಗ ಅವು ಮರುಮಾತಾಡ್ದೆ ಸಂತೋಷದಿಂದ ಮಗುವನ್ನು ಇಸ್ಕಂಡ. ಆ ಮಗುವು ತನ್ನ ಪುಟ್ಟ ಕೈಗಳಿಂದ ಮುಖ ಕಿವುಚೋದು, ಕೂದಲ ಎಳೆಯೋದು, ತನ್ನ ಪುಟ್ಟ ಕಾಲುಗಳಿಂದ ಅವನ ಎದೆಗೆ ಒದೆಯೋದು ಮಾಡುತ್ತಿತ್ತು. 
ಆ ಮಗುವಿನ ಚಿನ್ನಾಟ ಪ್ರಕಾಶನಿಗೆ ಅತಿ ಸಂತೋಷ ತರುತ್ತಿತ್ತು. ಅವನೂ ಮಗುವಿನಂತೆ ಅದರ ಜೊತೆಗೆ ತಲ್ಲೀನನಾದ. ಸ್ವಲ್ಪ ಹೊತ್ತಿನಲ್ಲಿಯೇ ಆ ಮಗು ಅವನ ತೊಡೆಯ ಮೇಲೆ ಮಲಗಿಬಿಡ್ತು. ಆ ಮಗುವಿನ ಜೊತೆ ಆಟದಲ್ಲಿ ಅವನು ಆ ಗೃಹಿಣಿಯ ನೆನಪೇ ಮರೆತುಬಿಟ್ಟಿದ್ದ. ಸಿಟಿ ಹತ್ರ ಬರಲಾರಂಬಿsಸಿತು. ಬಸ್ ಆಗಲೇ ಖಾಲಿಯಾಗಿತ್ತು. ಸೀಟ್‌ಗಳು ಮಾತ್ರ ತುಂಬಿದ್ದವು. ಆಗ ತನ್ನ ತೊಡೆಯಲ್ಲಿ ಮಲಗಿದ ಮಗುವಿಗೆ ತೊಂದರೆಯಾಗದಂತೆ ನೋಟ್ಸ್ ತೆಗೆದು ಓದಲು ಸ್ಟಾರ್‍ಟ್ ಮಾಡಬೇಕು ಅನ್ನುವಷ್ಟರಲ್ಲೇ ಅವನಿಗೆ ತಟ್ಟಂತೆ ಆ ಗೃಹಿಣಿಯ ನೆನಪು ಬಂದು ತಿರುಗಿ ನೋಡ್ದ. ತನ್ನ ಪಕ್ಕದಲ್ಲಿ ನಿಂತಿದ್ದ ಗೃಹಿಣಿ ಅಲ್ಲಿದ್ದಿಲ್ಲ. ಮುಂದೆ ಖಾಲಿ ಸೀಟ್‌ಲ್ಲಿ ಕೂತಿರಬಹುದು ಎಂದು ಎದ್ದು ನೋಡ್ದ. ಊಹಂ. ಆಗ ಅವನಿಗೆ ಆಶ್ಚರ್ಯ! ಎಲ್ಲಿ ಕೂತಿದ್ದಾಳೆ ಅಂತ ಇಡೀ ಬಸ್ನೆಲ್ಲ ಒಂದು ಸಾರಿ ಕಣ್ಣಾಯ್ಸಿದ. ಆ ಗೃಹಿಣಿ ಇದ್ದಿಲ್ಲ. ಆಗ ಸ್ಟಾರ್‍ಟ್ ಆಯ್ತು ಬುಗಿಲು.
ಮಗುವನ್ನು ತನ್ನ ಕೈಗೆ ಕೊಟ್ಟು ಗೃಹಿಣಿ ಎಲ್ಲಿ ಓದ್ಲು? ಮರೆತು ಹೋದ್ಲಾ? bs bs ಮಗುವನ್ನು ಮರೆತುಹೋಗೋದಾ? ಸಾಧ್ಯವಿಲ್ಲ ಎಂದುಕೊಂಡ. ಅಕ್ಕಪಕ್ಕದವರನ್ನು ವಿಚಾರಿಸಿದ. ಅವರಾರು ತನಗೂ ಇದಕ್ಕೂ ಸಂಬಂದಿsಲ್ಲ ಅನ್ನೋ ರೀತಿ 'ನಮಗೆ ಗೊತ್ತಿಲ್ರೀ' ಅಂದ್ರು. ತನ್ನ ಫ್ರೆಂಡ್ಸ್‌ಗಳಿಗೆ ಕೇಳಿದ್ರೆ 'ಏನೋ ಗೊತ್ತಿಲ್ಲ' ಅನ್ನೋ ಸೇಮ್ ಉತ್ತರ. ಆಗ ಅವು ನಿಜವಾಗಿಯೂ ದಂಗಾದ. ಅದು ಹ್ಯಾಗೆ ತಾಯಿ ಮಗುವನ್ನು ಮರೆತುಹೋದ್ಲು ಅಂತ ಅಳುಕಿನಿಂದಲೇ ಯೋಚಿಸಲು ಆರಂಬಿsಸಿದ.
ಈ ಎಲ್ಲ ಪ್ರಶ್ನೆ ಕೇಳೋ ಹೊತ್ತಿಗೆ ಬಸ್ ಸಿಟಿ ಬಸ್‌ಸ್ಟಾಪ್‌ಗೆ ಬಂದಿತ್ತು. ಆಗ ಟೈಮು ಒಂದೂ ಮುಕ್ಕಾಲು. ಏನ್ ಮಾಡೋದು ಮಗು ನೋಡಿದ್ರೆ ಅವನಹತ್ರ ಹಾಯಾಗಿ ಮಲಗಿತ್ತು. ಅವನಿಗೆ ದಿಕ್ಕೇ ತೋಚದ ಹಾಗಾಯ್ತು. ತನ್ನ ಗೆಳೆಯರು ಕಂಟ್ರೋಲರ್ ಹತ್ತಿರ ಹೋಗಿ ಅನೌನ್ಸ್ ಮಾಡಿಸಿ ಮಗು ಕೊಟ್ಟು ಬಂದುಬಿಡು ಎಕ್ಸಾಮ್‌ಗೆ ಲೇಟಾಗುತ್ತೆ ಎಂದು ಹೇಳಿ ಕಳಚಿಕೊಂಡ್ರು.
ಸೀದಾ ಕಂಟ್ರೋಲರ್ ಹತ್ರ ಹೋದ ಪ್ರಕಾಶ ನಡೆದ ಘಟನೆಯನ್ನೆಲ್ಲ ವಿವರಿಸಿ ಬೇಗ ಮೈಕ್‌ನಲ್ಲಿ ಅನೌನ್ಸ್ ಮಾಡುವಂತೆ ಕೇಳಿಕೊಂಡ. ಕಂಟ್ರೋಲರ್ ಇವನನ್ನು ಅಸಡ್ಡೆಯಿಂದ ನೋಡಿ, ನೀವು ತಲೆ ತಿನ್ನಾಕೆ ಬರ್‍ತೀರಾ, ನಿಧಾನ ಮಾಡ್ರಿ ಸ್ವಲ್ಪ ಅಂತ ಗೊಣಗಿಕೊಳ್ತ ಅನೌನ್ಸ್ ಮಾಡ್ದ. ಕಂಟ್ರೋಲರ್ 'ನೋಡ್ರೀ ನೀವು ಇಲ್ಲೇ ಇದ್ದು ಆ ಹೆಣ್ಮಗಳು ಬಂದ್ರೆ ಮಗ ಕೊಟ್ಟುಬಿಡ್ರಿ, ನಮಗೆ ಊಟದ ಟೈಮಾಯ್ತು' ಅಂತ ಹೇಳಿ ಹೊರಟುಹೋದ್ರು.
ಅಷ್ಟೊತ್ತಿಗಾಗ್ಲೇ ಎಕ್ಸಾಮ್‌ಗೆ ಸರಿಯಾಗಿ ಹತ್ತು ನಿಮಿಷ ಮಾತ್ರ ಟೈಮ್ ಬಾಕಿ ಉಳಿದಿತ್ತು. ಅಲ್ಲಿ ನೆರೆದಿದ್ದ ಪ್ರಯಾಣಿಕರೆಲ್ಲ ಅವನನ್ನು ಏನೋ ದೊಡ್ಡ ತಪು ಮಾಡಿದಾನೆ ಅನ್ನೋ ರೀತಿ ಆಶ್ಚರ್ಯದಿಂದ ನೋಡೋರು. ಆಗ ಆ ಮಗುವಿನ ಮೇಲೆ ಮಮಕಾರಕ್ಕೆ ಬದಲಾಗಿ ದ್ವೇಷ ಹುಟ್ಟಲಾರಂಬಿsಸಿತು. ತನ್ನನ್ನು ತಾನೇ ಬೈದುಕೊಂಡ. ಅಸಹಾಯಕತೆಯಿಂದ ಮಗುವನ್ನು ಎತ್ತಿಕೊಂಡು ನಿಂತಿದ್ದ. ಸುಮ್ಮನೆ ವೇಗವಾಗಿ ನಡೆಯಲಾರಂಬಿsಸಿದ, ಸುಮ್ಮನೆ ಸುತ್ತುತ್ತಿದ್ದ, ತಾನು ಎಲ್ಲಿಗೆ ಹೋಗ್ತಿದ್ದೀನಿ ಅನ್ನೋದು ತನಗೆ ಗೊತ್ತಿಲ್ಲ. ಬಸ್‌ಸ್ಟಾಂಡಿನಲ್ಲಿ ನೆರೆದಿದ್ದ ಪ್ರಯಾಣಿಕರೆಲ್ಲ ಆಶ್ಚರ್ಯದಿಂದ ನೋಡೋರು. ಕೆಲವು ಪರಿಚಿತರು ಅವನ ಜೊತೆಗೆ ಮಗು ಇದ್ದದ್ದು ನೋಡಿ ಯಾರದೀ ಮಗು? ನೀನ್ಯಾಕೆ ಎತ್ಕಂಡಿದಿ? ಅಂತ ಹಲವು ಬಗೆಯಲ್ಲಿ ಪ್ರಶ್ನೆ ಕೇಳೋರು. ಆದರೆ ಆಗ ಅವನು ಅದೇನ್ ಮಾತಾಡ್ತಿದ್ನೋ ಅವ್ನಿಗೆ ತಿಳಿತಿದ್ದಲ್ಲ. ಪ್ರಶ್ನೆಗಳನ್ನು ಕೇಳಿದವರ್‍ಯಾರ್‍ಗೂ ಅವು ಸರಿಯಾಗಿ ಆನ್ಸರ್ ಮಾಡ್ತಿದ್ದಿಲ್ಲ. ಸುಮ್ನೆ ಬಸ್‌ಸ್ಟ್ಯಾಂಡ್ ತುಂಬ ತಿರುಗುತ್ತಿದ್ದ. ಕೊನೆಗೆ ಅದೇನ್ ಹೊಳಿತೋ ವೇಗ ನಡಿಗೆಯಲ್ಲಿ ನಡೆದ. ಯಾರೂ ಇಲ್ಲದ ಖಾಲಿ ಬಸ್‌ನ ಕಡೆಗೆ ಬಂದ.
ನನ್ನ ಭವಿಷ್ಯವನ್ನು ರೂಪಿಸಲಾದರೂ ಈ ಮಗುವನ್ನು ಇಲ್ಲೇ ಬಿಟ್ಟುಹೋಗಬೇಕೆಂದು ಎಂದು ಮನದಲ್ಲೇ ನಿರ್ಧಾರ ಮಾಡ್ಕೊಂಡ. ಬಸ್‌ಸ್ಟ್ಯಾಂಡಿನ ಅನತಿ ದೂರದಲ್ಲಿ ನಿಂತಿದ್ದ ಖಾಲಿ ಬಸ್‌ನ ಒಳಗಿನ ಸೀಟ್‌ನಲ್ಲಿ ಆ ಮಗುವನ್ನು ಮಲಗ್ಸಿದ. ಆಗ ಮಗು ಇನ್ನೂ ನಿದ್ರೆಯಲ್ಲಿತ್ತು. ಆ ಮಗುವನ್ನ ನೋಡಿದ್ರೆ ಬಿಟ್ಟುಹೋಗೋ ಮನಸೇ ಬರ್‍ತಿಲ್ಲ. ತನ್ನ ಎಕ್ಸಾಮ್ ನೆನಸಿಕಂಡು ಇನ್ನೇನು ಬಸ್‌ನಿಂದ ಹೊರಬರಬೇಕು ಅನ್ನೋವಷ್ಟರಲ್ಲಿ 'ಏ ಯಾರದು, ಏನ್ ಮಾಡ್ತಿದಿ' ಅಂತ ಬಸ್ ಹತ್ತಿದ ಡ್ರೈವರ್ ಮಗೂನಾ ನೋಡಿ 'ಯಾರ್‍ದೀ ಮಗು? ಇಲ್ಲಿ ಯಾಕ್ ಬಿಟ್ಟು ಹೋಗ್ತಿದಿ?' ಅಂತ ಡ್ರೈವರ್ ಒಂದರ ಮೇಲೊಂದು ಪ್ರಶ್ನೆ ಕೇಳ್ತಿದ್ರೆ ಪ್ರಕಾಶ ಹೌಹಾರುತ್ತ 'ನನ್ಗೊತ್ತಿಲ್ಲ ಸಾರ್ ಅಂತಂತಿದ್ದ'. ಲೇ ಆ ಮಗೂನ ಎತ್ತಕಂಡ ಹೋಗ್ತೀಯಾ ಇಲ್ಲಾ ಪೊಲೀಸ್ ಕಂಪ್ಲೇಟ್ ಕೊಡ್ಲ ಅಂತ ಗದರಿಸಿದಾಗ 'ಇಲ್ಲಾ ಸಾರ್ ಮಗುನ ಎತ್ಕಂಡು ಹೋಗ್ತೀನಿ' ಅಂತ ಮರುಮಾತಾಡ್ದೆ ಇದ್ಯಾವ ಗತಿ ಬಂತಪ್ಪ ನನಗೆ ಅಂತ ಪ್ರಕಾಶ ಮಗೂನ ಎತ್ಕಂಡು ಓಡ್ದ.
ಅವನಿಗೆ ನಾನ್ ಯಾಕಪ್ಪ 'ಹೋಗೋ ದೆವ್ವನ ಮೈಮೇಲೆ ಎಳೆದುಕೊಂಡೆ' ಎಂದು ತನ್ನನ್ನೇ ಶಪಿಸಿಕೊಂಡ. ಆ ಹೆಂಗಸಿಗೆ ಸೀಟ್ ಬಿಟ್ಟುಕೊಟ್ಟಿದ್ರೆ ಈ ತಲೆನೋವು ಬರ್‍ತಿದ್ದಿಲ್ಲ. ಅವನಿಗೆ ಮುಂದೆ ಏನ್ ಮಾಡ್‌ಬೇಕೋ ತೋಚ್ತಾ ಇಲ್ಲ. ಅವನಿಗೆ ಇಡೀ ಜಗತ್ತು ಮಬ್ಬಾಗಿ ಕಾಣಿಸುತ್ತಿತ್ತು. ಸುಮ್ನೆ ಮಗುನ ಎದೇಲಿ ತಬ್ಬಿಕಂಡು ರಸ್ತೆ ತುಂಬ ಓಡಲಾರಂಬಿsಸಿದ. 'ಆ ದೇವ್ರು ಅಂತನಿಸಿಕೊಂಡೋನು ನನ್ನ ಪಾಲಿಗೆ ಇಲ್ಲ' ಅಂತ ಉಸುರುತ್ತ ಕಂಬನಿ ಹರಿಸಿದ. ಆದ್ರೆ ಅವು ಓಡೋದು ಮಾತ್ರ ಎಲ್ಲೂ ನಿಲ್ಲಿಸಲಿಲ್ಲ. ಇಷ್ಟೆಲ್ಲ ಅವಾಂತರಗಳಲ್ಲೂ ಮಗು ಮಾತ್ರ ಹಾಯಾಗಿ ಮಲಗಿತ್ತು. ಅವ್ನ ಓಟ ನಿಂತಿದ್ದು ಸೀದಾ ಪೊಲೀಸ್ ಸ್ಟೇಷನ್ ಒಳಗಡೇನೆ.
ಏದುಸಿರಿನಿಂದ ಪೊಲೀಸ್ ಸ್ಟೇಷನ್‌ನಲ್ಲಿ ತನ್ನ ಶಕ್ತಿಯನ್ನೆಲ್ಲಾ ಹಾಕಿ 'ಯಾರಿದ್ರೀ ಸಾರ್...' ಅಂತ ಕೂಗ್ದ. ಒಳಗಿಂದ ಯಾರ್‍ಲೇ ಅದು ಸ್ಟೇಷನ್‌ನಲ್ಲಿ ಅಷ್ಟು ಜೋರಾಗಿ ಒದರಿತಿರೋದು ಅಂತ ಪೊಲೀಸ್ ಬೈಕಂತ ಬಂದ. ಸಾರ್ ಸಾರ್ ನನಗೆ ಹೆಲ್ಪ್ ಮಾಡ್ರಿ... ಇನ್ ಹತ್ ನಿಮಿಷದಲ್ಲಿ ನನ್ಗೆ ಎಕ್ಸಾಮ್ ಇದೆ... ನಾನು ಎಕ್ಸಾಮ್‌ಗೆ ಹೋಗ್ಲೇ ಬೇಕು ಸಾರ್... ಇಲ್ಲಂದ್ರೆ ನನ್ನ ಲೈಫ್ ಹಾಳಾಗುತ್ತೆ ಸಾರ್.... ಪ್ಲೀಸ್ ಸಾರ್... ಅಂತ ಅರ್‍ದಂಬದ್ಧ ಮಾತಾಡ್ತಾ, ಕೆಲವು ಮಾತುಗಳು ಹೇಳ್ತಾ, ಕೆಲವು ಮಾತುಗಳನ್ನು ನುಂಗ್ತಾ ಮಾತಾಡ್ತಿದ್ದ. ಪೊಲೀಸ್ ಲೇ ಸರಿಯಾಗಿ ಏನಾಯ್ತು ಅಂತ ಹೇಳ್ಲೇ ಅಂದ. ನಡೆದ ಘಟನೆಯನ್ನು ಪ್ರಕಾಶ ಸಂಕ್ಷಿಪ್ತವಾಗಿ ಹೇಳಿ ಸಾರ್ ಈ ಮಗೂನ ನಿಮ್ಮತ್ತರ ಇಟ್ಟುಕೊಳ್ಳಿ ವಿವರವಾಗಿ ಎಲ್ಲದನ್ನು ನಾನು ಎಕ್ಸಾಮ್ ಬರೆದುಬಂದ ಮೇಲೆ ಹೇಳ್ತೀನಿ ಸಾರ್ ಎಂದು ಮಗುನ ಆ ಪೊಲೀಸ್‌ಗೆ ಕೊಡೋಕೆ ಹೋದಾಗ, ತಡಿಲೇ ತಮ್ಮ ಅಂಗ್ಯಾಕೆ ಅವಸರ ಮಾಡ್ತಿ. ಸಾಹೆಬ್ರು ಸ್ಟೇಷನ್‌ನಾಗಿಲ್ಲ. ಊಟಕ್ಕೆ ಹೋಗ್ಯಾರ. ಮೊದ್ಲು ನೀನು ಕಂಪ್ಲೇಂಟ್ ಬರೆದುಕೊಡು ಆಮೇಲೆ ನೋಡಾನು. ಸಾಹೇಬ್ರು ಹೇಳೋವರ್‍ಗೆ ನಾವು ಮಗನ ತಗಣಂಗಿಲ್ಲ ಅಂದಾಗ ಪ್ರಕಾಶನಿಗೆ ಆಕಾಶಾನೇ ಕಳಚಿ ಬಿದ್ದಂಗಾಯ್ತು.
ಪ್ರಕಾಶನಿಗೆ ಯೋಚ್ನೆ ಮಾಡೋಕೂ ಟೈಮಿಲ್ಲ. ನಿರ್ವಾಹವಿಲ್ಲದೆ ದಿಕ್ಕೇ ತೋಚ್ದೆ ಪೊಲೀಸ್ ಸ್ಟೇಷನ್‌ನಿಂದ ಹೊರ ಓಡ್ದ. ಅವನು ಓಡುವ ಓಟಕ್ಕೆ ಅವನ ಮೈ ಬೆವರು ಆ ಮಗುವಿಗೆ ಬಡಿದು ಸಿಂಚಿನದಂತೆ ತಗುಲಿ ಎಚ್ಚರವಾಯಿತು. ಆ ಮಗು ತನ್ನನ್ನು ಎತ್ತಿಕೊಂಡು ಓಡುತ್ತಿದ್ದ ಪ್ರಕಾಶನನ್ನೇ ನೋಡುತ್ತಿತ್ತು. ಆಶ್ಚರ್ಯವೆಂದರೆ ಮಗು ಅಳುತ್ತಿರಲಿಲ್ಲ. ಅವನು ಒಮ್ಮೆ ಮಗುವನ್ನು ಮತ್ತೊಮ್ಮೆ ದಾರಿಯನ್ನು ನೋಡುತ್ತಾ ಓಡಲಾರಂಬಿsಸಿದ. ಅವನಿಗೆ ಯಾಕೋ ಒಮ್ಮೆಲೇ ಅಳು ಬಂದುಬಿಡ್ತು. ದುಃಖ ಉಮ್ಮಳಿಸಿ ಬರ್‍ತಿತ್ತು. ಆದರೆ ಅವನು ಓಡೋದು ಮಾತ್ರ ನಿಲ್ಲಿಸಲಿಲ್ಲ. ಅಳ್ತಾನೇ ಓಡಲಾರಂಬಿsಸಿದ. ಓಡ್ದ, ಓಡ್ದ ಅವನು ತನ್ನ ಲೈಫ್‌ನಲ್ಲಿ ಅಷ್ಟು ಓಡಿರಲಿಲ್ಲ, ಅಷ್ಟು ಓಡ್ದ. ಅದು ಮಗುನ ಎದೆಗೆ ತಬ್ಬಿಗೊಂಡು!
ಕಾಲೇಜ್ ಗೇಟ್ ಹತ್ತಿರ ಬಂದ. ಅಲ್ಲಿ ಒಬ್ಬರ ಸುಳಿವಿಲ್ಲ. ಆಗ್ಲೇ ಎಕ್ಸಾಮ್ ಸ್ಟಾರ್‍ಟ್ ಆಗಿ ಎಷ್ಟೊತ್ತಾಯ್ತೋ? ನನ್ನನ್ನು ಎಕ್ಸಾಮ್‌ನಲ್ಲಿ ಕೂಡಿಸ್ತಾರೋ ಇಲ್ಲ ಅಂತ ಅಳುಕಿನಿಂದಲೇ ಕಣ್ಣೊರಸಿಕೊಳ್ತ ಓಡ್ದ. ಪ್ರಕಾಶ ಮಗುನ ಎತ್ಕಂಡು ಓಡ್ತಿದ್ದದ್ದನ್ನು ಹಾಲ್‌ನಲ್ಲಿದ್ದ ಲೆಕ್ಚರರ್, ಎಕ್ಸಾಮ್ ಬರೀತಿದ್ದ ಹುಡುಗ, ಹುಡುಗಿಯರೆಲ್ಲ ಇವನು ಪ್ರಕಾಶ್ ಅಲ್ವಾ? ಇವನ್ಯಾಕೆ ಮಗುನ ಎತ್ಕೊಂಡು ಬರುತ್ತಿದ್ದಾನೆ! ಅದು ಎಕ್ಸಾಮ್‌ಗೆ! ಅಂತ ಆಶ್ಚರ್ಯದಿಂದ ನೋಡೋರು.
ಸೀದ ಓಡಿದ್ದು ಪ್ರಿನ್ಸಿಪಾಲ್‌ರ ರೂಮಿಗೆ ಹೋಗಿ ನಡೆದ ಘಟನೆಯನ್ನು ಗದ್ಗದ ದನಿಯಲ್ಲಿ ಸಂಕ್ಷಿಪ್ತವಾಗಿ ವಿವರಿಸಿ ಈ ಮಗುವನ್ನು ಎಕ್ಸಾಮ್ ಆಗೋವರ್‍ಗೆ ನೋಡ್ಕಳ್ಳಿ ಸಾರ್ ಎಂದು ಪ್ರಿನ್ಸಿಪಾಲ್ರಿಗೆ ಹೇಳಿ ಮಗುವನ್ನು ಅಲ್ಲೇ ಇದ್ದ ಸೋಫಾದ ಮೇಲೆ ಮಲಗಿಸಿ ಅವರ ಮರುಮಾತಿಗೆ ಕಾಯದೇ ಎಕ್ಸಾಮ್ ಹಾಲ್‌ಗೆ ಹೋಗಿ ತನ್ನ ನಂಬರ್‌ನ್ನು ಹುಡುಕಲಾರಂಬಿsಸಿದ. ಆಗ್ಲೇ ಎಕ್ಸಾಮ್ ಸ್ಟಾರ್‍ಟ್ ಆಗಿ ಸರಿಯಾಗಿ ಅರ್‍ಧಗಂಟೆಯಾಗಿತ್ತು. ಇನ್ನೊಂದು ಸ್ವಲ್ಪ ಲೇಟ್ ಆಗಿದ್ರು ನೀನು ಎಕ್ಸಾಮ್ ಬರೆಯಕಾಗ್ತಿದ್ದಲ್ಲ, ದಿಸ್ ಇಸ್ ಲಾಸ್ಟ್ ವಾರ್‍ನಿಂಗ್. ಮೊದಲು ಎಕ್ಸಾಮ್ ಬರೀ ಆಮೇಲಿ ಮಾತಾಡ್ತೀನಿ ಅಂತ ಎಕ್ಸಾಮ್ ಸರ್ ಅಂದ್ರು. ತನ್ನ ಹಾಲ್ಟ್‌ಟಿಕೆಟ್ ನಂಬರ್ ಸೀಟ್‌ನಲ್ಲಿ ಕೂಥು ಸ್ವಲ್ಪ ಸಮಾಧಾನ ಮಾಡಿಕೊಂಡ. ಕರ್ಚೀಪಿsನಿಂದ ಬೆವರಿದ್ದ ಇಡೀ ಮುಖವನ್ನು ಒರಿಸಿಕೊಂಡ. ಆಗ ಅಲ್ಲಿದ್ದ ಹುಡುಗ ಹುಡುಗಿಯರೆಲ್ಲ ಬರೆಯುವುದನ್ನು ಬಿಟ್ಟು ಅವನನ್ನು ದಿಟ್ಟಿಸಿ ನೋಡ್ತಿದ್ದರು. ಇವನು ಎಕ್ಸಾಮ್‌ಗೆ ಯಾಕೆ ಅರ್‍ಧ ಗಂಟೆ ಲೇಟಾಗಿ ಬಂದಿದ್ದಾನೆ, ಅದಲ್ಲದೆ ಅಷ್ಟು ಚಿಕ್ಕ ಮಗುವನ್ನು ಕಾಲೇಜ್‌ಗೆ ಎತ್ಕಂಡ ಬಂದಿದಾನೆ, ಏನೋ ಸಮಸ್ಯೆ ಆಗಿದೆ ಪ್ರಕಾಶನಿಗೆ ಅಂತ ಅವರು ಮನದಲ್ಲೇ ಪ್ರಶ್ನೆ ಮಾಡಿಕೊಳ್ಳಲಾರಂಬಿsಸಿದರು.
ಪ್ರಶ್ನೆಪತ್ರಿಕೆ ನೋಡ್ದ ಮೇಲೆ ಸ್ವಲ್ಪ ಸಮಾಧಾನ ಆಯ್ತು. ತನಗೆ ತಿಳಿದಿದ್ದು, ಓದಿದ್ದನ್ನು ಬರೆಯಲಾರಂಬಿsಸಿದ. ಆಗಾಗ ಮಧ್ಯ ಮಗು ಅಳುತ್ತಿದ್ದಿತೋ ಏನೋ ಅಂತನಿಸುತ್ತಿತ್ತು. ನಂತರ ಮಗುವಿನ ಕಿರುಚಾಟ ಆ ಎಕ್ಸಾಮ್‌ನ ಪಿನ್‌ಡ್ರಾಪ್ ಸೈಲೆನ್ಸ್‌ನಲ್ಲಿ ಸ್ಪಷ್ಟವಾಗಿ ಕೇಳುತ್ತಿತ್ತು. ಆ ಕ್ಷಣವಂತೂ ಎಕ್ಸಾಮ್ ಬಿಟ್ಟು ಹೋಗಿಬಿಡ್ಲಾ ಅಂತನಿಸ್ತಿತ್ತು ಅವನಿಗೆ. ಆದ್ರೂ ಅದ್ಯಾವ ರೋಷದಿಂದಲೋ ಏನೋ ಅತೀ ವೇಗವಾಗಿ ತನಗೆ ಬಂದ ಉತ್ತರಗಳನ್ನು ಬರೆಯಲಾರಂಬಿsಸಿದ. ಎಕ್ಸಾಮ್ ಸ್ಟಿಲ್ ಆಫ್ ಅನ್ ಅವರ್ ಟೈಮು ರಿಮೇನಿಂಗ್ ಅಂತ ಸಾರ್ ಅಂದಾಗ ಅವನು ಆ ಬುಕ್‌ಲೆಟ್‌ನ್ನು ಸುಮಾರಿಗೆ ತುಂಬಿಸಿದ್ದ. ಇನ್ನೂ ೨೦ ಮಾರ್ಕ್ಸ್ ಬರೆಯೋದು ಮಾತ್ರ ಇತ್ತು. ಅವನಿಗ್ಯಾಕೋ ಮನಸು ತಡಿಲಿಕ್ಕಾಗಲಿಲ್ಲ. ಎದ್ದು ಬಿಟ್ಟ. ಎಕ್ಸಾಮ್ ಸಾರ್‌ಗೆ ಏನೂ ಹೇಳದೇ ನೇರ ಪ್ರಿನ್ಸಿಪಾಲ್ ಹತ್ರ ಹೋದ. ಮಗು ಅರಚುತಿತ್ತು. ಅದ್ಯಾವ ಸಂಬಂಧವೋ ಅನ್ನೋ ರೀತಿ ಮಗು ಎತ್ತಿ ತಬ್ಬಿಕೊಂಡ ಸ್ವಲ್ಪ ಕ್ಷಣದಲ್ಲೇ ಮಗುವಿನ ಅಳುವು ಸ್ವಲ್ಪ ಕಡಿಮೆಯಾಗಿತ್ತು. ಅವನು ಪ್ರಿನ್ಸಿಪಾಲ್ರ ಹತ್ರ ನಡೆದಿದ್ದನ್ನು ಸವಿಸ್ತಾರವಾಗಿ ತಿಳಿಸಿದ. ಆದ್ರೂ ನೀನ್ ಮಾಡಿದ್ದು ತಪು ಪ್ರಕಾಶ್. ಇನ್ನು ಮುಂದೆಯಾದ್ರು ಸ್ವಲ್ಪ ಎಚ್ಚರದಿಂದಿರು, ನಾನು ಬೇಕಾದ್ರೆ ಎಸ್.ಐ.ಗೆ ಫೋನ್ ಮಾಡಿ ಹೇಳ್ತಿನಿ ಅಂದ್ರು ಪ್ರಿನ್ಸಿಪಾಲ್. ಅಷ್ಟು ಮಾಡ್ರಿ ಸಾರ್ ನನಗೆ ಸ್ವಲ್ಪ ಧೈರ್ಯ ಬರುತ್ತೆ ಅಂದ ಪ್ರಕಾಶ.
ಮಗು ಅತ್ತು ಅತ್ತು ಮುಖವೆಲ್ಲ ಅಳುವಿನಿಂದ ತೊಯ್ದಿತ್ತು. ಮಗುನ ಕಾಲೇಜಿನ ಹೊರಗಡೆ ಎತ್ಕಂಡು ಬೇಕರಿಗೆ ಹೋಗಿ ಹಾಲು ಕುಡಿಸಿದ ನಂತರ ಎಲ್ಲ ಪ್ರೆಂಡ್ಸ್ ಜೊತೆಗೆ ಪೊಲೀಸ್ ಸ್ಟೇಷನ್‌ಗೆ ಕಡೆಗೆ ನಡೆದ. ಆಗ್ಲೇ ಎಸ್.ಐ. ಬಂದಿದ್ರು. ನಡೆದ ಘಟನೆಯನ್ನು ವಿಸ್ತಾರವಾಗಿ ತಿಳಿಸಿದ. ಆ ಗೃಹಿಣಿ ಹೇಗಿದ್ದಳು ಎನ್ನುವ ವಿಚಾರ ತಿಳಿದುಕೊಂಡ್ರು. ಸರಿ, ಆಯ್ತು, ಕಂಪ್ಲೇಂಟ್ ಬರೆದುಕೊಟ್ಟು ಮಗುನ ಬಿಟ್ಟು ಹೋಗು, ಆದ್ರೆ ನಾವು ಹೇಳಿ ಕಳಿಸಿದಾಗ ಬರಬೇಕು ಎಂದು ಎಸ್.ಐ. ಹೇಳಿದ. ಆಗ ಪ್ರಕಾಶನ ಮನಸು ತಣ್ಣಗಾಯಿತು. ಇನ್ನು ಮುಂದೆ ಯಾವ ಮಗುವನ್ನು ಕೂಡ ಎತ್ತಿಕೊಳ್ಳಬಾರದು ಅಂತ ನಿರ್ಧಾರ ಮಾಡ್ದ. ಆದ್ರೆ ಆ ಮಗುವನ್ನು ಪೋಲಿಸ್ರಿಗೆ ಕೊಡಲು ಮನಸು ಒಪುತ್ತಿದ್ದಿಲ್ಲ. ಮಗೂನ ಮನೆಗೆ ಕರಕಂಡ ಹೋದ್ರೆ ಬೈಗಳು! ಈ ಮಗು ಇನ್ನು ನನ್ನ ಹತ್ತಿರ ಇದ್ರೆ ಮತ್ತೇನು ಕಷ್ಟನೋ ಎಂದು ಒಲ್ಲದ ಮನಸ್ಸಲ್ಲಿ ಪೊಲೀಸ್ರಿಗೆ ಮಗುವನ್ನು ಕೊಟ್ಟಿದ್ದ.
ಒಂದು ದಿನ ಆಯ್ತು, ಎರಡು ದಿನ ಆಯ್ತು ಪ್ರಕಾಶನಿಗೆ ಪೊಲೀಸರಿಂದ ಯಾವ ಕರೆ ಬಂದಿದ್ದಿಲ್ಲ. ಪಾಪ ಮಗು ಹೇಗಿದಿಯೋ, ಆ ಮಗನ್ನ ನೋಡಿದ್ರೆ ಅಯ್ಯೋ ಅನಿಸುತ್ತೆ. ಪಾಪ! ನಾನು ಪೊಲೀಸರ ಹತ್ತಿರ ಕೊಡಬಾರದಿತ್ತು. ನನ್ನ ಹತ್ತಿರವೇ ಇರಬೇಕಾಗಿತ್ತು. ಮಗು ಎಷ್ಟು ಅಳುತ್ತಿದ್ದಿಯೋ ಏನೋ ಅಂತ ಮರುಗಲಾರಂಬಿsಸಿದ. ಮರುದಿನ ಒಬ್ಬ ಪೇದೆ ಬಂದು ನಿಮ್ಮನ್ನು ಸಾಹೇಬ್ರು ಕರೀತಿದಿರಾ ಸ್ಟೇಷನ್‌ಗೆ ಬರಬೇಕಂತೆ ಅಂತ ಹೇಳಿದ. ಆಗ ಪ್ರಕಾಶನಿಗೆ 'ಆ ಗೃಹಿಣಿ ಸಿಕ್ಕಿರಬಹುದು!' ಅದಕ್ಕೆ ಕರ್‍ಸಿರಬೇಕು ಅಂತ ಯೋಚ್ನೆ ಮಾಡ್ತ ಸ್ಟೇಷನ್‌ಗೆ ಕಾಲಿಡುತ್ತಲೇ ಅಲ್ಲಿದ್ದ ಗೃಹಿಣಿಯನ್ನು ಕಂಡು ಒಂದು ಕ್ಷಣದಲ್ಲಿ ಸಂತೋಷವಾಯ್ತು ಹಾಗೂ ಕೋಪಾನೂ ಬಂತು. ಏನಮ್ಮ ಮಗುನ ಕೊಟ್ಟು ಹಾಗೇನೇ ಮರೆತುಹೋಗೋದಾ, ಸ್ವಲ್ಪಾದ್ರೂ ತಲೆ ಅಯ್ತೇನಮ್ಮ, ಎಷ್ಟು ತೊಂದರೆಯಾಯ್ತು ಗೊತ್ತಾ ಅಂತ ಬೈತಿದ್ದಂಗೆ ಎಸ್.ಐ. ಸಾಹೇಬ್ರಿ ಗಲಾಟೆ ಮಾಡಬೇಡಿ, ಸುಮ್ಮನಿರು. ಇದೇನ್ ಬಜಾರ್ ಅನಕಂಡಿದಿಯಾ, ನಾವಿದೀವಿ ವಿಚಾರಿಸ್ತೀವಿ, ನಾವು ಯಾಕ್ ಇರೋದ ಅಂತ ಸಾಹೇಬ್ರು ಬೈದ್ರು.
ಈಗ ಹೇಳು ಪ್ರಕಾಶ ಈ ಗೃಹಿಣೀನಾ ನಿನಗೆ ಮಗುನ ಕೊಟ್ಟು ಹೋಗಿದ್ದು ಅಂತ ಪ್ರಶ್ನೆ ಮಾಡಿದ್ರು. ಹೌದು ಸಾರ್. ಈ ಹೆಣ್ಮಗಳೇ ಸಾರ್ ಅಂದ. ಆ ಗೃಹಿಣಿ ಅದಕ್ಕೆ ಈ ಮಗು ನಂದಲ್ಲ ಸಾರ್ ಎನ್ನಬೇಕೇ. ಆಗಂತೂ ಪ್ರಕಾಶನಿಗೆ ದಿಗ್ಭ್ನ್ರಮೆ. ಜಗತ್ತಿನಲ್ಲಿ ಇಂಥ ತಾಯಿಯರು ಇರ್‍ತಾರಾ 'ತನ್ನ ಮಗು ನಂದಲ್ಲ' ಅಂತ ಹೇಳೋ ತಾಯಿಯರನ್ನು ಏನ್ ಮಾಡಬೇಕೋ ಅಂತ ಮನಸಲ್ಲೇ ಬೈದುಕೊಂಡ. ಇಲ್ಲ ಸಾರ್ ಈ ಹೆಣ್ಮಗಳು ಸುಳ್ಳು ಹೇಳ್ತಾಳೆ, ಬೇಕಾದ್ರೆ ನಮ್ಮ ಪ್ರೆಂಡ್ಸ್‌ನ್ನ ಕೇಳಿ ಅಂದ. ಇವರಿಬ್ಬರ ಮಾತು ಕೇಳಿ ಇನ್ಸ್‌ಪೆಕ್ಟರ್ ಕನ್‌ಪ್ಯೂಸ್. ಕೊನೆಗೆ ಇವರಿಬ್ಬರ ವಾಗ್ವಾದ ಕೇಳಿ ಈ ಮಗು ಯಾರದು ಅನ್ನೋದು ಸಮಸ್ಯೆಯಾಯ್ತು. ಈ 'ಗೃಹಿಣಿಯದೇ' ಮಗು ಅನ್ನೋಕು ಯಾವ ಸಾಕ್ಷಿ ಇದ್ದಿಲ್ಲ. ಇನ್ನು ಈ ಪ್ರಕಾಶನ ಮಗು 'ಅಲ್ಲ' ಅಂತ ಅವನನ್ನು ನೋಡಿದ್ರೆ ಗೊತ್ತಾಗುತ್ತೆ. ಇದೊಂದು ದೊಡ್ಡ ಸಮಸ್ಯೆಯಾಯ್ತಲ್ಲ ಅಂತ ಕೊನೆಗೆ ಎಸ್.ಐ. ಸಾಹೇಬ್ರು ಒಂದು ನಿರ್ಧಾರಕ್ಕೆ ಬಂದ್ರು. ಈ ನಿರ್ಧಾರಕ್ಕೆ ಇವರಿಬ್ಬರು ಒಪ್ಪಿಗೆ ಸೂಚಿಸಿದರು.
ಅದೇನೆಂದರೆ ಆ ಮಗುವನ್ನು ಒಂದು ನಿರ್ದಿಷ್ಟ ಜಾಗದಲ್ಲಿ ನಿಲ್ಲಿಸಿ ತುಸು ದೂರದ ಎದುರಿನಲ್ಲಿ ಒಂದು ಕಡೆ ಗೃಹಿಣಿಯನ್ನು ಇನ್ನೊಂದು ಕಡೆ ಪ್ರಕಾಶನನ್ನು ನಿಲ್ಲಿಸಿ ಆ ಮಗು ಯಾರು ಹತ್ರ ಹೋಗುತ್ತೋ 'ಅವರದೇ ಮಗು' ಎಂದು ತಿಳಿಸಿದ್ರು. ಅದೇ ರೀತಿ ಮಗುವನ್ನು ತುಸು ದೂರದಲ್ಲಿ ನಿಲ್ಲಿಸಿದಾಗ ಆಗ ಮಗುವು ಅತ್ತ ಇತ್ತ ನೋಡಿ, ಅಳುತ್ತಾ ನಗುತ್ತಾ ವಿಚಿತ್ರ ರೀತಿಯಲ್ಲಿ ನೋಡುತ್ತ, ಅಂಬೆಗಾಲಿಡುತ್ತ ಸೀದಾ ಪ್ರಕಾಶನ ಹತ್ತಿರ ಬಂದುಬಿಡ್ತು. ಆಗಂತೂ ಪ್ರಕಾಶ ನನ್ನ ಕತೆ ಮುಗೀತು. 'ದೇವ್ರೆ ನೀನೂ ನನ್ನ ಪಾಲಿಗಿಲ್ಲ' ಅಂತ ಶಪಿಸಿಕೊಂಡ. ಸಾರ್ ಆ ಮಗು ನಂದಲ್ಲ ಸಾರ್, ಎಸ್.ಐ. ಲೇ ಪ್ರಕಾಶ ಸುಳ್ಳು ಹೇಳ್ತಿಯಾ? ಎಂದು ಲಾಟಿ ಎತ್ತಿದ್ದೇ ತಡ ಸಾರ್, ಒಡಿಬೇಡ್ರಿ ಸಾರ್... ಒಡಿಬೇಡಿ ಸಾರ್... ಆ ಮಗು ನಂದಲ್ಲ... ನಮಪ್ಪನಾಣೆಗೂ ನಂದಲ್ಲ ಸಾರ್... ಒಡಿಬೇಡ್ರಿ ಸಾರ್....ಸಾರ್
ಲೇ ಪ್ರಕಾಶ ಎದ್ದೇಳು, ಅದೇನ್ ಬಡಬಡ್ಸಿತಿದಿ, ಎಲ್ರನ್ನೂ ಗಾಬ್ರಿ ಮಾಡ್ಸಿತಿ ಅಂತ ಅವರಮ್ಮ ನೀರು ಚಿಮುಕಿಸಿದಾಗ ಹ್ಹಾ.... ಅಂತ ಗಾಬರಿಯಿಂದ ಎದ್ದು ನೋಡ್ತಾನೇ ಕತ್ತಲು. ಮನೆಯವರೆಲ್ಲ ಅವನನ್ನೇ ದಿಟ್ಟಿಸಿ ನೋಡ್ತಿದ್ದಾರೆ, ಅವರಣ್ಣ 'ಎಲ್ರ ನಿದ್ದೆ ಕೆಡಿಸಿದ್ಯಲ್ಲಲೇ, ಅದೇನ್ ಒಂದೇ ಸಮನ್ ವೈಕಂತಿದಿ' ಅಂತ ಬೈದ. 'ಯಾವುದೋ ಕೆಟ್ಟ ಕನಸು ಬಿದ್ದಿರಬೇಕು' ಅಂತ ಅವರಪ್ಪ ಅಂದ್ರು. ಟೈಮು ರಾತ್ರಿ ಎರಡು ಗಂಟೆ. ಮಲಗು ಅಂದು ಎಲ್ರೂ ತಮ್ಮ ತಮ್ಮ ರೂಂಗಳಿಗೆ ಹೋಗಿ ಮಲಗಿದ್ರು.
ನಾನಿಷ್ಟೊತ್ತು ಅನುಭವಿಸಿದ್ದು ಕನಸಾ?! 'ಅಬ್ಬ... ದೇವ್ರೇ ನೀನು ನನ್ನ ಪಾಲಿಗೆ ಇದಿಯಪ್ಪಾ ಎಷ್ಟು ಹೆದ್ರಿ ಬಿಟ್ಟಿದ್ದೆ.' ಕನಸು... ಕನಸು.... ಸಮಾಧಾನ ಮಾಡಿಕೊಂಡು ಮಲಗಲು ಹೋಗ್ತಾನೆ ನಿದ್ರೆ ಬರ್‍ತಿಲ್ಲ, ಆ ಮಗುವಿನ ಚಿತ್ರ ಮುಂದೆ ಬಂದುಬಿಡ್ತಿದೆ. ಎದ್ದು ನೋಡಿದ್ರೆ ಅದು ತನ್ನ ಮುಂದೇನೆ ಇದೆ, ಸರಿಯಾಗಿ ಕಾಣತ್ತಿಲ್ಲ... ಮಸುಕು... ಮಸುಕಾಗಿ ಕಾಣಿಸ್ತಿದೆ. ಆ ಮಗುನ ಮುಟ್ಟಲು ಹೋದ್ರೆ ಮಾಯವಾಗ್ತಿದೆ.... ಅದೇನೋ ಮನೆಯೆಲ್ಲ ತಿರುಗಿ ನೋಡಿದ್ರಿ ಮಸುಕಾಗಿ ಕಾಣ್ಸಿದೆ!!!



ವೈ.ಎಂ. ಶರಣಬಸವ

No comments:

kathe

kathe
Bannada TV -3

kathe

kathe
Bannada TV -1

Kathe

Kathe
Bannada TV -2